Breaking News

ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯ ಗ್ರಾಮಗಳಿಗೆ ಬಿಜೆಪಿ ನಿಯೋಗ ಭೇಟಿ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ

Spread the love

ರಾಮನಗರ: ಬಿಡದಿ ಟೌನ್‌ಶಿಪ್  ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಲು ಬಿಜೆಪಿ ನಿಯೋಗವು  ಯೋಜನಾ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹಾಗೂ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರನ್ನೊಳಗೊಂಡ ನಿಯೋಗವು ಮೊದಲು ಭೈರಮಂಗಲ ಗ್ರಾಮದ ಹಾಲಿನ ಡೈರಿಗೆ ಭೇಟಿ ನೀಡಿತು. ಈ ವೇಳೆ ಬಿಡದಿ ವ್ಯಾಪ್ತಿಯ ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆದ ನಾಯಕರಿಗೆ, ಇಲ್ಲಿ ತಿಂಗಳಿಗೆ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದು ರೈತರು ವಿವರಿಸಿದರು. ನಂತರ ಕೆಂಪಯ್ಯನಪಾಳ್ಯ ಗ್ರಾಮದ ರೈತ ಶ್ರೀನಿವಾಸ್ ಎಂಬುವವರ ತೋಟಕ್ಕೆ ತೆರಳಿ, ಅಲ್ಲಿ ಕಂಗೊಳಿಸುತ್ತಿದ್ದ ಸಪೋಟ, ತೆಂಗು, ಮಾವು ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿ ನಾಯಕರು ರೈತರೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್.ಅಶೋಕ್, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರೈತರ ಜಮೀನು ಕಸಿಯುವುದು ಸರ್ಕಾರದ ಕ್ರಿಮಿನಲ್ ಬುದ್ಧಿ. ಬೆಂಗಳೂರು ಸುತ್ತಮುತ್ತ ಇಷ್ಟೊಂದು ಹಸಿರು ಇರುವ ಜಾಗವನ್ನು ನಾನು ಯಾವತ್ತೂ ನೋಡಿಲ್ಲ. ಇಲ್ಲಿ ಒಂದಿಂಚೂ ಕೂಡಾ ಬೆಳೆ ಇಲ್ಲದಿರುವ ಜಮೀನಿಲ್ಲ. ತಿಂಗಳಿಗೆ 6 ಲಕ್ಷ ಲೀಟರ್ ಹಾಲು, ವಾರ್ಷಿಕ 35 ಕೋಟಿ ರೂ. ಮೌಲ್ಯದ ರೇಷ್ಮೆ ಬೆಳೆಯುತ್ತಿದ್ದಾರೆ. ಇಷ್ಟೊಂದು ರೇಷ್ಮೆ ಚಾಕಿ ಕೇಂದ್ರಗಳನ್ನು ಮುಚ್ಚಿ ಬಾರ್ ಮಾಡುತ್ತೀರಾ? ಹಸುಗಳನ್ನು ಕಸಾಯಿಖಾನೆಗೆ ಕಳುಹಿಸುತ್ತೀರಾ? ಮಾತೆತ್ತಿದರೆ 2 ಕೋಟಿ ಕೊಡುತ್ತೇನೆ ಎನ್ನುತ್ತೀರಿ, ರೈತರನ್ನೇನು ಪಿಕ್‌ನಿಕ್ ಕಳುಹಿಸುತ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆಯನ್ನು ಕುಮಾರಸ್ವಾಮಿ ಪ್ರಾರಂಭಿಸಿದ್ದರು ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಕುಮಾರಸ್ವಾಮಿ ಅವರು ಈ ಯೋಜನೆಯನ್ನು ಕೈಬಿಟ್ಟರಲ್ಲ, ನೀವೂ ಬಿಡಿ. ಯಡಿಯೂರಪ್ಪನವರ ಕಾಲದಲ್ಲೂ ಟೌನ್ ಶಿಪ್ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ನೀವೇಕೆ ಬಲವಂತವಾಗಿ ಮಾಡುತ್ತಿದ್ದೀರಿ? ಬೆಂಗಳೂರಿನಲ್ಲಿ 20 ಲಕ್ಷ ಸೈಟ್‌ಗಳು ಖಾಲಿ ಇವೆ. ಕೆಂಪೇಗೌಡ ಬಡಾವಣೆಯಲ್ಲಿ 40 ಸಾವಿರ ಸೈಟ್ ಮಾಡಿದ್ದೀರಿ, ಜನ ಸೈಟ್ ತೆಗೆದುಕೊಂಡಿದ್ದಾರೆಯೇ ಹೊರತು ಮನೆ ಕಟ್ಟುತ್ತಿಲ್ಲ. ಹೀಗಿರುವಾಗ ಈ ಬಲವಂತ ಏಕೆ? ಎಂದು ಪ್ರಶ್ನಿಸಿದರು.

ಒಳಿತು ಮಾಡು ಮನುಷ, ನೀ ಇರೋದು ಮೂರೇ ದಿವಸ ಅನ್ನೋಹಾಗೆ ಡಿ.ಕೆ. ಶಿವಕುಮಾರ್ ಅಧಿಕಾರದಲ್ಲಿರುವುದು ಇನ್ನು ಕೇವಲ ಒಂದೂವರೆ ವರ್ಷ ಮಾತ್ರ. ಈ ಯೋಜನೆ ಪ್ರಾರಂಭ ಮಾಡುವಷ್ಟರಲ್ಲಿ ನಿಮ್ಮ ಸರ್ಕಾರ ಹೋಗುತ್ತದೆ. ಮುಂದೆ ನಮ್ಮ ಸರ್ಕಾರ ಬಂದಾಗ ನಾವು ಈ ಯೋಜನೆಯನ್ನು ಮಾಡುವುದಿಲ್ಲ ಎಂದು ಭೈರಮಂಗಲ ಗ್ರಾಮದಲ್ಲಿ ಅಶೋಕ್ ಘೋಷಿಸಿದರು.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ