Breaking News

ಅಮೆರಿಕಾ ಇರಾನ್ ಯುದ್ಧ ನಿಂತಲ್ಲಿ ವಿಮಾನಯಾನಕ್ಕೆ ವೇಗ

Spread the love

ಬೆಳಗಾವಿ : ಅಮೆರಿಕಾ-ಇರಾನ್ ಒಂದು ಒಪ್ಪಂದಕೆ ಬರುವ ಲಕ್ಷಣಗಳು ಗೋಚರಿಸಿವೆ. ಇನ್ನೆರಡು ದಿನದಲ್ಲಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಬಹುದು. ಇದರಿಂದ ದೇಶದೊಳಗೆ ಕಡಿತಗೊಂಡಿದ್ದ ಎಲ್ಲ ವಿಮಾನಯಾನ ಸೇವೆಗಳಿಗೆ ಪುನಃ ವೇಗ ಸಿಗಲಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಆಯೋಜಿಸಿದ್ದ ಯಾತ್ರಿ ಸುವಿಧಾ ದಿನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲ್ಲಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನ ಸೇವೆ ನೀಡಲು ಅನೇಕ ಕಂಪನಿಗಳನ್ನು ಕೇಳಿಕೊಂಡಿದ್ದೇವು. ಕೆಲವರು ಒಪ್ಪಿಗೆ ಸಹ ಸೂಚಿಸಿದ್ದರು. ಇದೇ ವೇಳೆಗೆ ಅಮೆರಿಕಾ-ಇರಾನ್ ಮಧ್ಯೆ ಯುದ್ಧ ಶುರುವಾಗಿ, ಇಂಧನ ಬೆಲೆಗಳು ಹೆಚ್ಚಳವಾಗಿ ಅದು ನಿಂತು ಹೋಗಿತ್ತು. ಯುದ್ಧ ನಿಂತಲ್ಲೆ ಆ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಗಲಿದೆ ಎಂದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಎರಡು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಇದು ಹಳೆಯ ಕಾಲದ ವಿಮಾನ ನಿಲ್ದಾಣ. ರಾಜ್ಯದ ಪ್ರಮುಖ ಕೇಂದ್ರಸ್ಥಾನವಾಗಿ ಬೆಳಗಾವಿ ಗುರುತಿಸಿಕೊಂಡಿದೆ. ಹೀಗಾಗಿ, ಈ ನಿಲ್ದಾಣ  ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ 12 ವರ್ಷಗಳಲ್ಲಿ ದೇಶದ ವಿಮಾನ ಯಾನ ಕ್ಷೇತದಲ್ಲಿ ಹೊಸ ದಾಖಲೆ ಮಾಡಿದೆ. ಎಲ್ಲ ನಿಲ್ದಾಣಗಳಿಗೆ ಬಲ ತುಂಬಿದೆ. ಉಡಾನ್ ಯೋಜನೆಯಿಂದ ವಿಮಾನಯಾನ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿದೆ. ಇದನ್ನೆಲ್ಲ ಜನರಿಗೆ ತಿಳಿಸುವ ಅಗತ್ಯವಿದೆ.  ವಿಮಾನ ನಿಲ್ದಾಣಗಳಲ್ಲಿ ಜಾರಿಯಲ್ಲಿರುವ ಯೋಜನೆಗಳ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಯಾತ್ರಿ ಸುವಿಧಾ ದಿನ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.
ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರಾದ ವಿಜಯ ಭದ್ರಾ, ರಾಹುಲ ಮುಚ್ಚಂಡಿ, ಜಯಸಿಂಗ ರಜಪುತ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಇತರರಿದ್ದರು.
ನಿಲ್ದಾಣಕ್ಕೆ ಬೇರೆ ಬೇರೆ ನಗರಗಳಿಂದ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರಿಗೆ ಹಣೆಗೆ ತಿಲಕವನ್ನಿಟ್ಟು, ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಸ್ವಾಗತಿಸಿಕೊಳ್ಳಲಾಯಿತು. ಇದೇ ರೀತಿ ನಿರ್ಗಮಿಸುವವರನ್ನೂ ಬೀಳ್ಕೊಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಕಲಾನಡಿಗೆ ನಿಮ್ಮ ಬಳಿಗೆ’ ಎಂಬ ಶೀರ್ಷಿಕೆಯಡಿ ಲೀಲಾ ಹೆಗಡೆ ಸಮೂಹ ನೃತ್ಯ, ಸತ್ಯನಾರಾಯಣ ಭಟ್ ತಂಡದಿಂದ ಸುಗಮ ಸಂಗೀತ, ಗೂಳಪ್ಪ ವಿಜಯನಗರ ವೀರಗಾಸೆ ನೃತ್ಯ ಪ್ರಸ್ತುತಪಡಿಸಿದರು. ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ವಿದ್ಯಾವತಿ ಭಜಂತ್ರಿ ಇದ್ದರು.
ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರಗಳು ನಡೆದವು. ನಿಲ್ದಾಣದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳು ನಿಲ್ದಾಣಕ್ಕೆ ಆಗಮಿಸಿ, ವೀಕ್ಷಿಸಿದರು. ಇವರಿಗೆ ಪೈಲಟ್, ಎಟಿಸಿ ಅಧಿಕಾರಿ ಸೇರಿದಂತೆ ನಾಗರಿಕ ವಿಮಾನಯಾನ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಪಡೆಯಲು ಆಯ್ದುಕೊಳ್ಳಬೇಕಿರುವ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಲಾಯಿತು.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ