ಧಾರವಾಡ: ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿರುವ ಅವಧಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಸಮಸ್ಯೆಗಳು ಉಂಟಾಗಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು(ನರೇಗಾ) ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಪಂಚಾಯತ್‍ಗಳಲ್ಲಿ ನರೇಗಾ ಚಟುವಟಿಕೆಗಳು ಪ್ರಾರಂಭವಾಗವೆ. ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿದ್ದು, ದೇವಲಿಂಗಿಕೊಪ್ಪದ ಕೆರೆಗೆ ನೀರಿನ ಕಾಲುವೆ ನಿರ್ಮಾಣ ಕಾರ್ಯ, ಬೀರುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಂಡಲಗಟ್ಟಿ ಗ್ರಾಮದ ಕೆರೆಯ ಹೂಳೆತ್ತುವ ಕಾಮಗಾರಿ ಸೇರಿದಂತೆ ರಸ್ತೆ, ದನದ ಕೊಟ್ಟಿಗೆ, ಜಂಗಲ್ ಕಟಾವು ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಾರಂಭವಾಗಿವೆ.
ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗಳಿಗೆ ಸರ್ಕಾರ ನಿಯಮಾವಳಿಗಳನ್ನು ನೀಡಿದೆ. ಕೃಷಿಹೊಂಡ, ಬದು ನಿರ್ಮಾಣ, ಎರೇಹುಳು ಗೊಬ್ಬರ ಘಟಕದಂತಹ ಚಟುವಟಿಕೆಗಳಿಗೆ ಹೆಚ್ಚು ಅವಕಾಶವಿದೆ. ಉದ್ಯೋಗ ಬಯಸುವವರಿಗೆ ಹಾಗೂ ಕೂಲಿಗಾರರಿಗೆ ಕೆಲಸ ನೀಡಲಾಗುವುದು. ಕೂಲಿ ದರವನ್ನು ಏ. 1ರಿಂದ 249 ರೂಪಾಯಿಗಳಿಂದ 275 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ ಸತೀಶ್ ತಿಳಿಸಿದ್ದಾರೆ.