ಹಾವೇರಿ: ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲ ಬೇಕಾಗಿರುವ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಉಪಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದು, ಶಾಸಕ ನೆಹರು ಓಲೇಕಾರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಮಾಡಿದ್ದಾರೆ.
ಹಾವೇರಿ ನಗರದ ವೈಭವ ಲಕ್ಷ್ಮೀ ಪಾರ್ಕ್ ನಲ್ಲಿರೋ ಶಾಸಕ ಓಲೇಕಾರ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು, ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮತ್ತು ಓಲೇಕಾರ ನಡುವಿನ ಮುನಿಸು ಶಮನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ನೆಹರು ಓಲೇಕಾರ ಅವರು, ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದಕ್ಕೆ ಮುನಿಸಿಕೊಂಡಂತೆ ದೂರವೇ ಉಳಿದಿದ್ದರು. ಆಗಲೂ ಸಿಎಂ ಶಾಸಕ ಓಲೇಕಾರ ಮುನಿಸು ಶಮನ ಮಾಡಿದ್ದರು. ಇನ್ನು ಹಾನಗಲ್ ಉಪಚುನಾವಣೆ ಪ್ರಚಾರದಲ್ಲಿ ಶಾಸಕ ಓಲೇಕಾರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನಲೆಯಲ್ಲಿ ಸಿಎಂ, ಶಾಸಕರ ಮನೆಗೆ ಭೇಟಿ ನೀಡಿದ್ದರಂತೆ. ಸಂಸದ ಶಿವಕುಮಾರ ಉದಾಸಿ ಅವರೊಂದಿಗೆ ಸಿಎಂ ಆಗಮಿಸುತ್ತಿದಂತೆ ಶಾಸಕ ಓಲೇಕಾರ ಮಾಲೆ ಹಾಕಿ ಮನೆಗೆ ಸ್ವಾಗತಿಸಿದ್ದರು. ಆ ಬಳಿಕ ಸುಮಾರು ಸಮಯ ಸಿಎಂ ಅವರೊಂದಿಗೆ ಚರ್ಚೆ ನಡೆಸಿದ್ದರು.

ಸಿಎಂರಿಂದ ಸಚಿವ ಸ್ಥಾನ ನೀಡೋ ಆಶ್ವಾಸನೆ..
ಸಿಎಂ ಜೊತೆಗಿನ ಮಾತುಕತೆ ಬಳಿಕ ಮಾತನಾಡಿದ ನೆಹರೂ ಓಲೆಕಾರ್, ಹಾನಗಲ್ ಉಪಚುನಾವಣೆ ಬಗ್ಗೆ ಸಿಎಂ ಹಾಗೂ ನಾವು ಚರ್ಚೆ ಮಾಡಿದೆವು. ಯಡಿಯೂರಪ್ಪನವರು ಪ್ರಚಾರ ಮಾಡೋಕೆ ಬರ್ತಾರೆ. ನಾವು ಪಕ್ಷ ಗೆಲ್ಲಿಸಬೇಕಿದೆ ಸಂಘಟನೆ ಕೂಡಾ ಮಾಡಬೇಕಾಗಿದೆ. ಸಂಧಾನ, ಮನವೊಲಿಕೆ ಅಂತ ಏನೂ ಇಲ್ಲ, ನಾವೆಲ್ಲಾ ಒಗ್ಗಟ್ಟಿನಿಂದ ಇದ್ದೇವೆ. ಅಭ್ಯರ್ಥಿ ಜೊತೆ ಓಡಾಡುತ್ತೇವೆ, ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವೆಲ್ಲಾ ಕೂಡಿ ಇದ್ದವರೇ, ಸಣ್ಣ ಪುಟ್ಟ ಭಿನ್ನಾಭಿಪ್ರಾಯ ತಿದ್ದಿ ಕೊಂಡು ಹೋಗಬೇಕು ಎಂದು ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ಸಚಿವ ಸ್ಥಾನದ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ. ಸಚಿವ ಸ್ಥಾನ ಸಿಕ್ಕರೂ ಕೆಲಸ ಮಾಡುತ್ತೇವೆ, ಸಿಗದಿದ್ದರೂ ಕೆಲಸ ಮಾಡುತ್ತೇವೆ ಎಂದು ಹೇಳಿದರು.