ಸವದತ್ತಿ: ‘ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದು, ಕಂಗಾಲಾಗಿರುವ ರೈತರಿಗೆ ಕೂಡಲೇ ಸಮರ್ಪಕ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ರೈತ ಸಂಘದವರು ಉಪ ತಹಶೀಲ್ದಾರ್ ಆರ್.ಎಸ್. ನೇಸರಗಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಿಜ್ಜೂರ ಮಾತನಾಡಿ, ‘ಬರ, ನೆರೆ, ಅತಿವೃಷ್ಟಿ ಹೀಗೆ ಒಂದಿಲ್ಲೊಂದು ತೊಂದರೆಗೆ ರೈತರು ಪ್ರತಿ ವರ್ಷವೂ ಸಿಲುಕುತ್ತಿದ್ದೇವೆ. ಕಷ್ಟಪಟ್ಟು ಬೆಳೆದ ಬೆಳೆ ನಮ್ಮ ಕೈ ಸೇರುತ್ತಿಲ್ಲ. ಈ ಬಾರಿ ಅತಿವೃಷ್ಟಿಯಿಂದ ಹೆಸರು, ಮೆಕ್ಕೆಜೋಳ, ಈರುಳ್ಳಿ, ಉದ್ದು, ಸೋಯಾಬೀನ್, ಹತ್ತಿ ಬೆಳೆಗಳು ಹಾನಿಗೊಳಗಾಗಿವೆ’ ಎಂದು ತಿಳಿಸಿದರು.

‘ರೈತರು ಸಾಲ ಮರುಪಾವತಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಕೃಷಿಕರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು.
ಬೆಳೆ ಹಾನಿ ಪರಿಹಾರವನ್ನು ಕೂಡಲೇ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು’ ಎಂದು ಒತ್ತಾಯಿಸಿದರು.
ಉಪಾಧ್ಯಕ್ಷೆ ಶ್ರೀದೇವಿ ನಾಯ್ಕರ, ತಾಲ್ಲೂಕು ಘಟಕದ ಅಧ್ಯಕ್ಷೆ ಪಾರ್ವತಿ ಯಮನೂರ, ಶಿವಲೀಲಾ ಯಮನೂರ, ಸ್ನೇಹಾ ಸಾವಂತ, ಸೋಮಲಿಂಗಪ್ಪ ಕೇಮನ್ನವರ, ಸದರಸಾಬ ಪಟ್ಟಣ, ಎಸ್.ಎಂ. ಕರೋಶಿ, ಹನಮಂತ ಜಾಲಿಕಟ್ಟಿ, ಅನಿಲ ಕೆಂಗಾನೂರ, ಶಂಕ್ರಯ್ಯ ಹಿರೇಮಠ ಇದ್ದರು.
Laxmi News 24×7