ಮೂಡಲಗಿ: ರಾಜ್ಯದಲ್ಲಿ ಒಟ್ಟು 1,27,00,451 ಪಡಿತರ ಕಾರ್ಡ್‌ಗಳು ಇದ್ದು ಇವುಗಳಲ್ಲಿ 63,922 ಕಾರ್ಡ್‌ಗಳನ್ನು ಅನರ್ಹ ಪಡಿತರ ಕಾರ್ಡ್‌ಗಳೆಂದು ಗುರುತಿಸಿ ರದ್ದು ಪಡಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, 43,138 ಕಾರ್ಡ್‌ಗಳನ್ನು ಬಿಪಿಎಲ್‌ದಿಂದ ಎಪಿಎಲ್‌ಗೆ ಪರಿವರ್ತಿಸಲಾಗಿದೆ ಮತ್ತು ಅಕ್ರಮ ಬಿಪಿಎಲ್ ಕಾರ್ಡ್‌ಗಳನ್ನು ವಾಪಸ್ ಪಡೆಯುವಾಗ ಕಾರ್ಡ್‌ದಾರರಿಂದ ದಂಡದ ರೂಪದಲ್ಲಿ ಒಟ್ಟು 96,27,961 ರೂ. ಖಜಾನೆಗೆ ಪಾವತಿಸಿಕೊಳ್ಳಲಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಆಹಾರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 5,08,485 ಕಾರ್ಡ್‌ಗಳಿದ್ದು ಇವುಗಳಲ್ಲಿ ಅತೀ ಹೆಚ್ಚು ಅಂದರೆ 8,308 ಕಾರ್ಡ್‌ಗಳು ಹಾಗೂ ಕೊಡಗು ಜಿಲ್ಲೆಯಲ್ಲಿ 1,09,940 ಕಾರ್ಡ್‌ಗಳಿದ್ದು ಇವುಗಳಲ್ಲಿ ಅತೀ ಕಡಿಮೆ ಎಂದರೆ 234 ಅಕ್ರಮ ಕಾರ್ಡ್‌ಗಳನ್ನು ರದ್ದು ಪಡಿಸಲಾಗಿದೆ.
11,29,818 ಪಡಿತರ ಕಾರ್ಡ್ ಹೊಂದಿರುವ ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ಇದರಲ್ಲಿ 3097 ಕಾರ್ಡ್‌ಗಳನ್ನು ರದ್ದು ಪಡಿಸಲಾಗಿದ್ದು ಅಕ್ರಮ ಕಾರ್ಡ್ ದಾರರಿಂದ 34,64,457 ರೂ. ದಂಡ ವಸೂಲಿ ಮಾಡುವ ಮೂಲಕ ಇದರಲ್ಲಿಯೂ ರಾಜ್ಯಕ್ಕೆ ಪ್ರಥಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಚಿಕ್ಕಬಳ್ಳಾಪುರ, ಮೈಸೂರು, ರಾಯಚೂರು, ಕೊಪ್ಪಳ ಸೇರಿದಂತೆ 15 ಜಿಲ್ಲೆಗಳಲ್ಲಿ 17,173 ಕಾರ್ಡ್ ರದ್ದುಪಡಿಸಿದ್ದರೂ ದಂಡದ ರೂಪದಲ್ಲಿ ಹಣ ಪಾವತಿಸಿಕೊಳ್ಳದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸರ್ಕಾರದ ಯೋಜನೆ ಪಡೆಯುವ ಸಲುವಾಗಿ ಸುಳ್ಳು ದಾಖಲೆ ನೀಡಿ ತಾವು ತೆಗೆದುಕೊಂಡಿರುವ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಸರ್ಕಾರದ ನಿರ್ದೇಶನದ ಮೇರೆಗೆ ಪ್ರಾಮಾಣಿಕವಾಗಿ ವಾಪಸ್ಸು ಮಾಡುತ್ತಿರುವ ಬಡ ಜನರಿಂದ ಕೋಟಿಗಟ್ಟಲೇ ಹಣ ದಂಡದ ರೂಪದಲ್ಲಿ ಪಾವತಿಸಿಕೊಂಡಿರುವ ಸರ್ಕಾರವು ಸಂಸದೀಯ ಕಾರ್ಯದರ್ಶಿಗಳು ನೇಮಕವೇ ಅಸಿಂಧು ಎಂದು ರಾಜ್ಯ ಉತ್ಛ ನ್ಯಾಯಾಲಯ ತಿರ್ಪು ನೀಡಿದ್ದರಿಂದ, ಆಗಿನ ಸಂಸದೀಯ ಕಾರ್ಯದರ್ಶಿಗಳ ತಮ್ಮ ಅಧಿಕಾರವಧಿಯಲ್ಲಿ ವೇತನ, ಭತ್ಯೆಗಳ ರೂಪದಲ್ಲಿ ಸರ್ಕಾರದಿಂದ ಪಾವತಿಸಿಕೊಂಡಿರುವ 3,67,71,716 ರೂ. ಶಾಸಕರುಗಳಿಂದ ಸರ್ಕಾರಕ್ಕೆ ಮರು ಪಾವತಿಸಿಕೊಳ್ಳಲು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು 5 ತಿಂಗಳು ಕಳೆದಿದ್ದರೂ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿರುವ ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರದಿಂದ ನೀಡಿದ್ದ ಅಕ್ಕಿ ಹಾಗೂ ಇತರೆ ಧಾನ್ಯಗಳ ಲೆಕ್ಕ ಮಾಡಿ ಅವರಿಂದ ಮರಳಿ ಹಣ ಪಾವತಿಸಿಕೊಳ್ಳುತ್ತಿರುವ ಸರ್ಕಾರವು ಸಂಸದೀಯ ಕಾರ್ಯದರ್ಶಿಗಳಿಗೆ ನೀಡಿರುವ ಕೋಟ್ಯಂತರ ರೂ. ವೇತನ ಭತ್ಯೆಗಳನ್ನು ಸರ್ಕಾರಕ್ಕೆ ಮರು ಪಾವತಿಸಿಕೊಳ್ಳದೇ ಇದ್ದಲ್ಲಿ ಸರ್ಕಾರದ ಕ್ರಮ ಪ್ರಶ್ನಿಸಿ ರಾಜ್ಯ ಉತ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದಿದ್ದಾರೆ.