ಬೆಂಗಳೂರು: ಪ್ರತಿಭಟನೆ ವೇಳೆ ಕರ್ತವ್ಯದಲ್ಲಿದ್ದ ಡಿಸಿಪಿ ಮೇಲೆಯೇ ಯುವ ಕಾಂಗ್ರೆಸ್ ಮುಖಂಡ ಗೂಂಡಾವರ್ತನೆ ತೋರಿ ಹಲ್ಲೆ ನಡೆಸಿದ್ದರೂ, ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸದೆ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಭಾನುವಾರ ಸಂಜೆ ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಯತ್ನ ನಡೆಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಚಾರ್ಜ್ ನಡೆಸಿದ್ದರು.
ಲಾಠಿ ಚಾರ್ಜ್ ಸಂದರ್ಭದಲ್ಲಿ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಹಾಗೂ ಕಾರ್ಯಕರ್ತರು ಕರ್ತವ್ಯ ನಿರತ ಪೊಲೀಸರ ಮೇಲೆಯೇ ಮುಗಿಬಿದ್ದಿದ್ದಾರೆ. ಉತ್ತರ ವಿಭಾಗದ ಡಿಸಿಪಿ ನೇಮೆಗೌಡ ಅವರನ್ನೇ ಹಿಡಿದು ತಳ್ಳಾಡಿ, ಅವರ ಮೇಲೆ ಹಲ್ಲೆ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರ್ಕಾರದ ಪ್ರಭಾವಕ್ಕೆ ಮಣಿದು ಪೊಲೀಸ್ ಇಲಾಖೆ ಮಂಡಿಯೂರಿ ಕೂತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
Laxmi News 24×7