ಚಿಕ್ಕೋಡಿ: ಹಾವು ಕಡಿತದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ಸರ್ಪ ಕಡಿತದ ಸಂಖ್ಯೆ ಹೆಚ್ಚಿದ್ದು, ಹೊಲ-ಗದ್ದೆಗಳಲ್ಲಿ, ಹೊರ ಆವರಣದಲ್ಲಿ ಕೆಲಸ ಮಾಡುವ ಜನರು ಜೀವಭಯದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಶಾಲೆ-ಕಾಲೇಜುಗಳ ಮೈದಾನ, ಉದ್ಯಾನಗಳಲ್ಲೂ ಹಾವುಗಳ ಭಯ ಕಾಡುವಂತಾಗಿದೆ.
ಮಳೆಗಾಲದಲ್ಲಿ ಜಮೀನು, ಶಾಲೆ-ಕಾಲೇಜು, ಮನೆ, ಶಿಥಿಲ ಕಟ್ಟಡಗಳ ಸುತ್ತಲು ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಹಾವುಗಳ ವಂಶಾಭಿವೃದ್ಧಿಗೆ ಸೂಕ್ತ ಸಮಯವಾಗಿರುವ ಹಿನ್ನೆಲೆಯಲ್ಲಿ ಈ ದಿನಗಳಲ್ಲಿ ಹಾವುಗಳು ಹೆಚ್ಚಾಗಿ ಕಾಣಸಿಗುತ್ತವೆ. ಮಳೆ ಹಿನ್ನೆಲೆಯಲ್ಲಿ ಸುರಕ್ಷಿತ ಪ್ರದೇಶದಲ್ಲಿ ಅಡಗಿಕೊಳ್ಳುವ ಭರದಲ್ಲಿ ಜನವಸತಿ ಪ್ರದೇಶ, ಕೊಟ್ಟಿಗೆ, ಶೌಚಾಲಯ ಸೇರಿದಂತೆ ಗೋಡೆ ಕಿಂಡಿಗಳಲ್ಲಿ ಸೇರಿಕೊಳ್ಳುತ್ತವೆ ಎನ್ನುತ್ತಾರೆ ಉರಗ ತಜ್ಞರು.
ಜಿಲ್ಲೆಯಲ್ಲಿ ಹಾವು ಕಡಿತ ಏರಿಕೆ: ಹಾವು ಕಡಿತದ ಪ್ರಕರಣಗಳು ಜಿಲ್ಲೆಯಲ್ಲಿ ಕಳೆದೆರಡು ವರ್ಷದಲ್ಲಿ ಅಲ್ಪ ಏರಿಕೆ ಕಂಡಿದೆ. 2024ರಲ್ಲಿ 214 ಪ್ರಕರಣದಲ್ಲಿ ಮೂವರು, 2025ರಲ್ಲಿ 228 ಪ್ರಕರಣದಲ್ಲಿ ಮೂವರು ಜೀವ ಕಳೆದುಕೊಂಡಿದ್ದಾರೆ. 2026ರಲ್ಲಿ ಜನವರಿಯಿಂದ ಮೇವರೆಗೆ ಒಟ್ಟು 114 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಸವದತ್ತಿ ತಾಲೂಕಿನಲ್ಲಿ ಅತಿ ಹೆಚ್ಚು ಮತ್ತು ರಾಯಬಾಗ ತಾಲೂಕಿನಲ್ಲಿ ಅತಿ ಕಡಿಮೆ ಪ್ರಕರಣಗಳು ಕಂಡುಬಂದಿವೆ.
ಒಂದೇ ತಿಂಗಳಲ್ಲಿ ಎರಡು ಸಾವು: ಪ್ರಸ್ತುತ ಮುಂಗಾರು ಮಳೆ ಆರಂಭವಾದಗಿನಿಂದ ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಹುಕ್ಕೇರಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಶಾಂತಾ ಕಳವಿಕಟ್ಟಿ, ಬಣವೆಯಿಂದ ಮೇವು ತರಲು ಹೋಗಿದ್ದ ಅಥಣಿ ತಾಲೂಕಿನ ಅಡಹಳಿಟ್ಟಿ ಗ್ರಾಮದ ರಾಕೇಶ ತಾಂವಂಶಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.
ಗೋಲ್ಡ್‌ನ್ ಅವರ್‌ನಲ್ಲಿ ಚಿಕಿತ್ಸೆ ಅಗತ್ಯ: ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೆ ಒಳಗಾಗದೆ 45 ನಿಮಿಷದ ಒಳಗಾಗಿ ಆಸ್ಪತ್ರೆಗೆ ಕರೆ ತಂದರೆ ಜೀವ ಉಳಿಸಬಹುದು. ಕಡಿತದ ಜಾಗದಲ್ಲಿ ಬಿಗಿಯಾಗಿ ಕಟ್ಟುವುದು, ಬ್ಲೇಡ್ ಅಥವಾ ಚಾಕುವಿನಿಂದ ಕೊಯ್ಯುವುದು, ಬಾಯಿಯಿಂದ ರಕ್ತ ಹೀರುವುದು ಮತ್ತು ನಾಟಿ ವೈದ್ಯರಿಂದ ಔಷಧಿ ಪಡೆಯುವುದು ಮಾಡಬಾರದು. ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಬೇಕು. ಕಾಲಿಗೆ ಉದ್ದನೆಯ ಬೂಟ್ (ಗಮ್ಬೂಟ್) ಧರಿಸಬೇಕು. ಅತಿಯಾದ ಹುಲ್ಲು ಇದ್ದಲ್ಲಿ ನೋಡಿಕೊಂಡು ಕೆಲಸ ಮಾಡಬೇಕು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯ: ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಆ್ಯಂಟಿ ಸ್ನೇಕ್ ವೇನಮ್ (ಎಎಸ್‌ವಿ) ಚುಚ್ಚುಮದ್ದು ಲಭ್ಯವಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆ ಸೇರಿ ಒಟ್ಟು 6,471 ಚುಚ್ಚುಮದ್ದು ಸಂಗ್ರಹವಿದೆ. ಕೊರತೆಯಾಗದಂತೆ ವೇನಮ್ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7