ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ಭಾರಿ ಮೊತ್ತದ ಹಣವನ್ನು ನಿಯಮ ಬಾಹಿರವಾಗಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದೆ ಎಂದು ಆರೋಪಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ತುರ್ತು ಪತ್ರ ಬರೆದಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಇರುವ ಸಂಸದೀಯ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಡಾ. ಫಗ್ಗನ್ ಸಿಂಗ್ ಕುಲಸ್ತೆ ಅವರಿಗೆ ಜೂನ್ 16ರಂದು ಅಧಿಕೃತ ಪತ್ರ ಬರೆದಿರುವ ಅವರು, ಈ ಸಾಂವಿಧಾನಿಕ ಉಲ್ಲಂಘನೆಯ ವಿರುದ್ಧ ತಕ್ಷಣವೇ ಹಸ್ತಕ್ಷೇಪ ಮಾಡಬೇಕೆಂದು ಒತ್ತಾಯಿಸಿದ್ದಾರೆ.
53,059 ಕೋಟಿ ಹಣ ವರ್ಗಾವಣೆ!
ರಾಜ್ಯ ಸರ್ಕಾರವು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ 2013 ರ ಸ್ಪಷ್ಟ ಉಲ್ಲಂಘನೆ ಮಾಡಿದ್ದು, ಕೇವಲ ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕಿದ್ದ ಹಣವನ್ನು ಸಾರ್ವತ್ರಿಕ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ಪತ್ರದಲ್ಲಿ ಅಂಕಿ-ಅಂಶಗಳ ಸಮೇತ ವಿವರ ನೀಡಲಾಗಿದೆ.
ಯಾವ ವರ್ಷ ಎಷ್ಟು ಕೋಟಿ ರೂ.?
2023-24 —>11,144
2024-25 —> 14,282.68
2025-26 —> 13,433.84
2025-27 —> 14,198.93
ಒಟ್ಟು ವರ್ಗಾವಣೆ —> 53,059.45
ಪ್ರತದಲ್ಲಿ ಏನಿದೆ?
ಎಸ್‌ಸಿ/ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗಳು, ಹಾಸ್ಟೆಲ್‌ಗಳು, ಕೌಶಲ್ಯಾಭಿವೃದ್ಧಿ, ವಸತಿ ಯೋಜನೆಗಳು ಮತ್ತು ಉದ್ಯಮಶೀಲತೆ ಪ್ರೋತ್ಸಾಹಕ ಕಾರ್ಯಕ್ರಮಗಳಿಗೆ ಸಿಗಬೇಕಿದ್ದ ಹಣ ಕಡಿತಗೊಂಡು ತೀವ್ರ ಹಿನ್ನಡೆಯಾಗಿದೆ.
2013 ರ ಕಾಯ್ದೆಯ ಪ್ರಕಾರ ಈ ನಿಧಿಯನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ. ಆದರೆ ಸರ್ಕಾರವು ಕಾನೂನು ಬಾಹಿರವಾಗಿ ಇದನ್ನು ಬಳಸಿಕೊಂಡಿದೆ. ಸಂವಿಧಾನದ ವಿಧಿಗಳಾದ 14, 15(4), 16(4), 38, 46 ಮತ್ತು 275 ರ ಅಡಿಯಲ್ಲಿ ದುರ್ಬಲ ವರ್ಗದ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿ ಕಾಪಾಡುವ ಜವಾಬ್ದಾರಿಯನ್ನು ಸರ್ಕಾರ ಮರೆತಿದೆ.
ಛಲವಾದಿ ಬೇಡಿಕೆ ಏನು?
1. ಕಳೆದ ಮೂರು-ನಾಲ್ಕು ಹಣಕಾಸು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣದ ಬಳಕೆಯ ಬಗ್ಗೆ ಸಮಗ್ರ ಆಡಿಟ್ ನಡೆಸಬೇಕು.
2. ಗ್ಯಾರಂಟಿ ಯೋಜನೆಗಳಿಗೆ ಈ ಹಣ ಬಳಸಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಬೇಕು. ದಲಿತ ಸಮುದಾಯಕ್ಕೆ ನೇರ ಲಾಭವಾಗದ ಕಾರ್ಯಕ್ರಮಗಳಿಗೆ ಈ ಹಣ ಹಂಚಿಕೆ ಮಾಡುವುದನ್ನು ತಕ್ಷಣವೇ ನಿಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು.
3. ಈಗಾಗಲೇ ಡೈವರ್ಟ್ ಮಾಡಲಾಗಿರುವ ಸಂಪೂರ್ಣ ಹಣವನ್ನು ಮರಳಿ ಸಮಾಜ ಕಲ್ಯಾಣ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಗಳಿಗೆ ಜಮಾ ಮಾಡುವಂತೆ ಸೂಚಿಸಬೇಕು.
4. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಸಾಂವಿಧಾನಿಕ ತಜ್ಞರನ್ನು ಒಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು.ಇದು ಕೇವಲ ಹಣಕಾಸಿನ ವಿಷಯವಲ್ಲ, ಇದು ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಬದ್ಧತೆಯ ಪ್ರಶ್ನೆಯಾಗಿದೆ.
Laxmi News 24×7