ಧಾರವಾಡ: ಶ್ರೀರಾಮ ಹಾಗೂ ಹಿಂದೂ ಧರ್ಮಗ್ರಂಥಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಡಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಧಾರವಾಡ ಶಹರ ಪೊಲೀಸ್ ಠಾಣೆಗೆ ಶಿವಸೇನೆ (Shiv Sena) ಕಾರ್ಯಕರ್ತರು ದೂರು ನೀಡಿದ್ದಾರೆ.
ಪ್ರೊ. ಭಗವಾನ್ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಸೇನೆ ಮುಖಂಡರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪ್ರೊ. ಬಿ. ಕೃಷ್ಣಪ್ಪ ಜಯಂತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪ್ರೊ. ಭಗವಾನ್ ಭಾಗವಹಿಸಿದ್ದರು.
ಈ ವೇಳೆ ಸಾರ್ವಜನಿಕ ವೇದಿಕೆಯಲ್ಲಿ ಹಿಂದೂ ಧರ್ಮ, ಪ್ರಭು ಶ್ರೀರಾಮಚಂದ್ರ ಹಾಗೂ ಹಿಂದೂ ಧರ್ಮಗ್ರಂಥಗಳ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೊಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ಶ್ರೀರಾಮನ ಕುರಿತು ಹಾಗೂ ಹಿಂದೂ ಧರ್ಮಗ್ರಂಥಗಳ ಬಗ್ಗೆ ನೀಡಿರುವ ಹೇಳಿಕೆಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು ಶಿವಸೇನೆ ಆರೋಪಿಸಿದೆ. ಹೀಗಾಗಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆ ಕಾರ್ಯಕರ್ತರು ಧಾರವಾಡ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Laxmi News 24×7