ಚಿತ್ರದುರ್ಗ: ಅದು ಗ್ರಾಮೋದ್ಯೋಗ ಕನಸಿನನೊಂದಿಗೆ ಹುಟ್ಟಿದ ಖಾದಿ ಸಹಕಾರ ಸಂಘ. ಅನೇಕರ ಸೇವೆಯಿಂದ ಸಂಘದ ಹೆಸರಿನಲ್ಲಿರುವ ಕೋಟ್ಯಂತರ ರೂ ಮೌಲ್ಯದ ಆಸ್ತಿಯಿದೆ. ಆದರೆ ಇದೀಗ ಸುಮಾರು 4 ಕೋಟಿ ರೂ ಮೌಲ್ಯದ ಸಂಘದ ಆಸ್ತಿ ಭೂಗಳ್ಳರ ಪಾಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸಂಘದ ಆಸ್ತಿಯನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಲಪಟಾಯಿಸಿರುವ ಆರೋಪ ಕೇಳಿ ಬಂದಿದೆ.
ಮಹಾತ್ಮ ಗಾಂಧೀಜಿ ಅವರ ಗ್ರಾಮ ಭಾರತದ ಕನಸಿನೊಂದಿಗೆ ಚಿತ್ರದುರ್ಗದಲ್ಲಿ ಜಿಲ್ಲಾ ಖಾದಿ ಪರಸ್ಪರ ಸಹಕಾರ ಸಂಘ ನಿರ್ಮಾಣವಾಗಿತ್ತು. ಚಿತ್ರದುರ್ಗ, ಭರಮಸಾಗರ ಸೇರಿದಂತೆ ವಿವಿಧೆಡೆ ಸಂಘದ ಬೆಲೆ ಬಾಳುವ ಆಸ್ತಿಯಿದೆ. ಆದರೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್ಎಂಎಲ್ ತಿಪ್ಪೇಸ್ವಾಮಿ ಎಂಬುವವರು ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿರುವ ಆಸ್ತಿ ಲಪಟಾಯಿಸಿದ್ದಾರೆ. ಸಂಘದ ಮಾಜಿ ಉದ್ಯೋಗಿ ಜಯಪ್ಪ ಎಂಬುವರನ್ನು ಬಳಸಿಕೊಂಡು 4 ಕೋಟಿ ರೂ ಮೌಲ್ಯದ ಆಸ್ತಿಯನ್ನು ಖಾಲಿ ಜಾಗ ಎಂದು ನಕಲಿ ದಾಖಲೆ ಸೃಷ್ಟಿಸಿ 40 ಲಕ್ಷ ರೂಪಾಯಿಗೆ ಖರೀದಿಸಿದ್ದಾಗಿ ದಾಖಲೆ ಸೃಷ್ಟಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.
ಇನ್ನು ಚಿತ್ರದುರ್ಗ ನಗರ, ಮಾಳಪ್ಪನಹಟ್ಟಿ, ಮಾನಂಗಿ, ಭರಮಸಾಗರ ಸೇರಿ ವಿವಿಧೆಡೆ ಸಂಘದ ಆಸ್ತಿ ಇದೆ. ಗ್ರಾಮದ ಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಎಲ್ಲಾ ಕಡೆ ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. ಆದರೆ ಭರಮಸಾಗರದಲ್ಲಿ ಮಾತ್ರ ಗ್ರಾಮ ಪಂಚಾಯತಿ ಅಧಿಕಾರಿಗಳು, ಸಬ್ ರಿಜಿಸ್ಟ್ರಾರ್ ಸೇರಿದಂತೆ ಇತರೆ ಅಧಿಕಾರಿಗಳು ಶಾಮೀಲಾಗಿ ಸಹಕಾರ ಸಂಘದ ಆಸ್ತಿ ಕಬಳಿಸಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಈ ಬಗ್ಗೆ ದೂರು ಸಲ್ಲಿಸಿದ್ದೇವೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಹಕಾರ ಸಂಘದ ಆಸ್ತಿ ಉಳಿಸಬೇಕು ಎಂದು ಸಂಘದ ಸದಸ್ಯ ತಿಮ್ಮಣ್ಣ ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗದಲ್ಲಿ ಗಾಂಧೀಜಿ ಗ್ರಾಮ ಭಾರತ ಕನಸಿನೊಂದಿಗೆ ಹುಟ್ಟಿದ ಖಾದಿ ಸಹಕಾರ ಸಂಘದ ಆಸ್ತಿಯನ್ನ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ ಆರೋಪ ಕೇಳಿ ಬಂದಿದೆ. ಅದರಲ್ಲೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಸ್ಎಂಎಲ್ ತಿಪ್ಪೇಸ್ವಾಮಿ ಮತ್ತು ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿದೆ. ಹೀಗಾಗಿ, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Laxmi News 24×7