ಬೆಳಗಾವಿ: ಶಿಸ್ತುಬದ್ಧ ತೆರಿಗೆ ಪಾವತಿ ಸೇರಿ ದೇಶದ ಕಾನೂನು ಪಾಲನೆಯಲ್ಲಿ ಯೋಜನಾ ಬದ್ಧ ಜೀವನ ವ್ಯವಸ್ಥೆ ಹೊಂದಿರುವ ಕರ್ನಾಟಕಕ್ಕೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ವಿಶೇಷ ಸ್ಥಾನವಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿಗಳ ಬೆನ್ನು ಹತ್ತಿ ಮಂಡಿಸಿದ ಬಜೆಟ್ ಇಡೀ ರಾಜ್ಯದ ಆರ್ಥಿಕತೆ ಕುಸಿತಕ್ಕೆ ಕಾರಣವಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆರ್ಥಿಕ ತಜ್ಞರೆಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ, ಉತ್ತರ ಕರ್ನಾಟಕ ಬಗ್ಗೆ ತೋರುತ್ತಿರುವ ಕಾಳಜಿ, ಅಭಿವೃದ್ಧಿಯಲ್ಲಿ ಕಾಣುತ್ತಿಲ್ಲ. ಕರ್ನಾಟಕ, ಬೆಂಗಳೂರು ಕೇಂದ್ರೀಕೃತವಾಗಿ ಬೆಳೆಯುತ್ತಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ನಗರಗಳ ಬೆಳವಣಿಗೆ, ನೀರಾವರಿ ಯೋಜನೆ, ಶಿಕ್ಷಣ ಹಾಗೂ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.
ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಲಯದಲ್ಲಿನ ಶಿಕ್ಷಕರ ಹುದ್ದೆ ಭರ್ತಿ ವಿಷಯ ಎರಡು ವರ್ಷಗಳಿಂದ ಚರ್ಚೆಯಲ್ಲಿದ್ದರೂ ಒಳ ಮೀಸಲಾತಿ ನೆಪದಲ್ಲಿ ಇಂದಿಗೂ ಕ್ರಮವಹಿಸಿಲ್ಲ. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿನ ದ್ವಂದ್ವ ನಿಲುವುಗಳು ಶೈಕ್ಷಣಿಕ ಗುಣಮಟ್ಟ ಕುಸಿತಕ್ಕೆ ಕಾರಣವಾಗುತ್ತಿವೆ ಎಂದಿದ್ದಾರೆ.
ನಿಲುವು ಸ್ಪಷ್ಟಪಡಿಸಲಿ: ದೊಡ್ಡ ಗ್ರಾಪಂ ಮೇಲ್ದರ್ಜೆಗೇರಿಸಿ ಬಿಜೆಪಿ ಸರ್ಕಾರ ಮಾಡಿದ್ದ ನಗರಾಭಿವೃದ್ಧಿಗೆ ಪೂರಕವಾಗಿ ನಂತರ ಬಂದ ಕಾಂಗ್ರೆಸ್ ಸರ್ಕಾರ, ಸಿಬ್ಬಂದಿ ಕೊರತೆ, ಮೂಲಸೌಕರ್ಯ ಒದಗಿಸಿ ಆರ್ಥಿಕ ಶಕ್ತಿ ತುಂಬುವ ಕೆಲಸವೂ ಮಾಡಿಲ್ಲ. ಸದ್ಯ ಸಿಬ್ಬಂದಿ ಕೊರತೆಯಿಂದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳು ದಯನೀಯ ಸ್ಥಿತಿಗೆ ತಲುಪಿದ್ದರೂ ಬಜೆಟ್ನಲ್ಲಿ ಪರಿಹಾರ ಸೂಚಿಸಲಿಲ್ಲ.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆ ತಲುಪಿಸುವ ಜವಾಬ್ದಾರಿ ಗ್ರಾಪಂ, ತಾಪಂ, ಜಿಪಂಗೆ ಇದ್ದರೂ, ಐದು ವರ್ಷಗಳಿಂದ ಅವುಗಳಿಗೆ ಚುನಾವಣೆ ಜರುಗಿಸುವ ಪ್ರಯತ್ನವೂ ಕಂಡು ಬರುತ್ತಿಲ್ಲ. ಇದೇ ಕಾರಣದಿಂದ ಕೇಂದ್ರದಿಂದ ಬರುವ ಅನುದಾನದಲ್ಲಿ ಕಡಿತ ಆಗಿರುವುದು ಸ್ವತಃ ರಾಜ್ಯ ಸರ್ಕಾರದ ಗಮನಕ್ಕಿದ್ದರೂ ಸ್ಥಳೀಯ ಆಡಳಿತ ಗಟ್ಟಿಗೊಳಿಸುವ ಕೆಲಸ ಆಗುತ್ತಿಲ್ಲ. ‘ಕಾಂಗ್ರೆಸ್ ನಡಿಗೆ ಕೃಷ್ಟೆಯ ಕಡೆಗೆ’ ಎಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ 2013ರಿಂದ 2018 ಮತ್ತು 2023ರಿಂದ ಇಲ್ಲಿಯವರೆಗಿನ 8 ವರ್ಷಗಳ ಅವಧಿಯಲ್ಲಿ ‘ಬಜಾವತ್ ತೀರ್ಪು’ ಪ್ರಕಾರ ಆಲಮಟ್ಟಿ ಅಣೆಕಟ್ಟೆ ಎತ್ತರಿಸುವ ಮತ್ತು ನೀರು ಸದ್ಬಳಕೆ ಮಾಡುವ ವಿಚಾರದಲ್ಲಿ ಸಂಪೂರ್ಣ ಎಡವಿದೆ. ಗ್ಯಾರಂಟಿ ಬೆನ್ನು ಹತ್ತಿ ಏತ ನೀರಾವರಿ, ಕೆರೆ ತುಂಬಿಸುವ ಯೋಜನೆಗಳಿಗೂ ಅನುದಾನ ನೀಡದ ರಾಜ್ಯ ಸರ್ಕಾರ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸದೆ ವೈಫಲ್ಯ ಎದುರಿಸುತ್ತಿದೆ. ಆಲಮಟ್ಟಿ ಹಿನ್ನೀರು ಬಾಧಿತ ಗ್ರಾಮಗಳಿಗೆ ಪುನರ್ವಸತಿ ಹಾಗೂ ಜಮೀನು ಕಳೆದುಕೊಂಡವರಿಗೆ ಆರ್ಥಿಕ ನೆರವು ನೀಡುವಲ್ಲೂ ಸರ್ಕಾರದ ಬಳಿ ಸ್ಪಷ್ಟತೆ ಇಲ್ಲ.
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರಗಳು ಜಾರಿಗೆ ತಂದಿದ್ದ ಸಿಲ್ವರ್ ಪಾರ್ಕ್, ಕೈಗಾರಿಕಾ ಪಾರ್ಕ್, ಜವಳಿ ಪಾರ್ಕ್, ಐಟಿ ಪಾರ್ಕ್ ಯೋಜನೆಗಳಿಗೆ ಮೂಲಸೌಕರ್ಯ ಒದಗಿಸದೇ ಉಕ ಯುವಕರನ್ನು ನಿರುದ್ಯೋಗಿಗಳನ್ನಾಗಿಸುತ್ತಿದೆ. ಜನಸಾಮಾನ್ಯರ ನಿರೀಕ್ಷೆ ಸಾಕಾರಗೊಳಿಸಬೇಕಿದ್ದ ಸಿದ್ದರಾಮಯ್ಯ ಬಜೆಟ್ ಸಂಪೂರ್ಣ ವಿಲತೆ ಕಂಡಿರುವುದರಿಂದ ಆರ್ಥಿಕ ಸ್ಥಿತಿಗತಿಗಳ ಕುರಿತು ಇದೇ ವಿಧಾನ ಮಂಡಲ ಅಧಿವೇಶನದಲ್ಲೇ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
Laxmi News 24×7