ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಬೇಕೆಂದು ರಂಭಾಪುರಿ ಶ್ರೀಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು. ಸಿದ್ದರಾಮಯ್ಯರನ್ನು ಕಂಡ್ರೆ ಶಾಮನೂರು ಶಿವಶಂಕರಪ್ಪ ಅವರಿಗೆ ಬಹಳ ಪ್ರೀತಿ. ಅವರಿಲ್ಲದೆ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ, ಸಿಎಂ ಇಲ್ಲೇ ಬಂದು ಸಿಎಂ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಇಂದು ದಾವಣಗೆರೆಯಲ್ಲಿ ನಡೆದ ದಿ.ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಹಾಗೂ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.![]()
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಶಾಮನೂರು ಶಿವಶಂಕರಪ್ಪ ದೇಶ ಕಂಡ ಹಿರಿಯ ಶಾಸಕರು. ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಜವಾಬ್ದಾರಿ ನಿಭಾಯಿಸಿದ್ದಾರೆ. ಅವರ ಹುಟ್ಟು ಹಬ್ಬದಲ್ಲಿ ನಾನು ಭಾಗಿಯಾಗಿದ್ದೆ. ದಾಲ್ ಫ್ಯಾಕ್ಟರಿ ಉದ್ಘಾಟನೆಗೆ ಬಂದಿದ್ದೆ. ನೂರು ವರ್ಷ ಪೂರೈಸುತ್ತಾರೆ ಅಂದುಕೊಂಡಿದ್ದೆ. ಆದರೆ, ಇವತ್ತು ನಮ್ಮನ್ನೆಲ್ಲ ಅಗಲಿದ್ದಾರೆ. ರಾಜ್ಯಕ್ಕೆ, ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಯಾವಾಗಲೂ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ದೀರ್ಘಕಾಲದವರೆಗೆ ಕಾಂಗ್ರೆಸ್ ಖಜಾಂಚಿ ಆಗಿದ್ದರು. ಜಾತ್ಯತೀತ ನಾಯಕರಾಗಿದ್ದವರು. ಅವರ ಕ್ಷೇತ್ರದಲ್ಲಿ ಲಿಂಗಾಯತರು ಕಡಿಮೆ ಇದ್ರೂ ಗೆಲ್ತಾ ಇದ್ರು. ಯಾವಾಗಲೂ ಕೊಡುಗೈ ದಾನಿಯಾಗಿದ್ರು. ಜೀವನ ಸಾರ್ಥಕತೆ ಮಾಡಿಕೊಂಡು ಎಲ್ಲರಿಗೂ ಆದರ್ಶರಾಗಿದ್ದಾರೆ. ದಾವಣಗೆರೆಯಲ್ಲಿ ಜವಳಿ ಉದ್ಯಮ ಅವನತಿ ಆರಂಭವಾದಾಗ ಶೈಕ್ಷಣಿಕ ಕ್ರಾಂತಿ ಮಾಡಿದ್ದರು. ದಾವಣಗೆರೆ ವಿದ್ಯಾಕಾಶಿ ಆಗಲು ಶಾಮನೂರು ಶಿವಶಂಕರಪ್ಪ ಮುಖ್ಯ ಕಾರಣ. ಎಲ್ಲ ಪಕ್ಷದಲ್ಲೂ ಅವರಿಗೆ ಸ್ನೇಹಿತರಿದ್ದಾರೆ. ಶಾಮನೂರು ಒಂದು ರೀತಿಯಲ್ಲಿ ಅಜಾತ ಶತ್ರು” ಎಂದು ಬಣ್ಣಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, “ಶರಣರ ಗುಣವನ್ನು ಮರಣದಲ್ಲಿ ಕಾಣಬೇಕು ಎಂದು ಗುರುಹಿರಿಯರು ಹೇಳುತ್ತಾರೆ. ಮನುಷ್ಯನ ಜೀವನ ಶಾಶ್ವತ ಅಲ್ಲ, ಮಾಡುವ ಕೆಲಸಗಳು ಶಾಶ್ವತ. ಆ ಶಾಶ್ವತ ಕೆಲಸಗಳನ್ನು ಶಾಮನೂರು ಮಾಡಿದ್ದಾರೆ. ಹೃದಯ ಶ್ರೀಮಂತಿಕೆ ಹೊಂದಿದ ವ್ಯಕ್ತಿ ಶಾಮನೂರು. ಅವರ ಜೊತೆ ವಿಧಾನಸೌಧದಲ್ಲಿ ಸಾಕಷ್ಟು ಸಮಯ ಕಳೆದಿದ್ದೆ. ಎಷ್ಟು ಆದರ್ಶವಾಗಿ ಬದುಕಿದ್ದರು ಎಂದು ಅವರಿಗಾಗಿ ಇಂದು ಸೇರಿದ ಜನರಲ್ಲಿ ಕಾಣುತ್ತಿದ್ದೇವೆ. ಕೊರೊನಾ ವೇಳೆ ಶಾಮನೂರು ಶಿವಶಂಕರಪ್ಪ ಅವರ ಕೆಲಸ ಬಹುದೊಡ್ಡದು. ದಾವಣಗೆರೆ ಜನರಿಗೆ ಉಚಿತಾಗಿ ಕೋವಿಡ್ ವ್ಯಾಕ್ಸಿನ್ ಕೊಡಿಸಿದ್ದರು” ಎಂದು ಸ್ಮರಿಸಿದರು.
ಶಾಮನೂರು ಅವರು ಮಠಗಳಿಗೆ ದೇಣಿಗೆ ಕೊಟ್ಟು ಬೆಳೆಸಿದರು. ಸ್ವಾಮೀಜಿಗಳಿಗೆ ಅಪಾರ ಗೌರವ ಕೊಡುತ್ತಿದ್ದ ಅವರು ದೈವ ಭಕ್ತರಾಗಿದ್ದರು ಎಂದು ಪೀಠಾಧಿಪತಿಗಳು, ಸ್ವಾಮೀಜಿಗಳು ಕೊಂಡಾಡಿದರು.
Laxmi News 24×7