ಮೈಸೂರು: ವಿಶ್ವವಿಖ್ಯಾತ ದಸರಾ ಹಿನ್ನೆಲೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರು ಇಂದು ಅಧಿಕೃತ ಆಹ್ವಾನ ನೀಡಿದರು.
ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಅರಮನೆ ಆವರಣದಲ್ಲಿರುವ ಪ್ರಮೋದಾದೇವಿ ಒಡೆಯರ್ ಅವರ ನಿವಾಸಕ್ಕೆ ಭೇಟಿ ನೀಡಿ, ಸಾಂಪ್ರದಾಯಿಕವಾಗಿ ಫಲ ತಾಂಬೂಲ ನೀಡಿ ದಸರಾಗೆ ಆಹ್ವಾನಿಸಿದರು.ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, “ಸಾಂಪ್ರದಾಯಿಕವಾಗಿ ರಾಜವಂಶಸ್ಥರನ್ನು ದಸರಾಗೆ ಆಹ್ವಾನಿಸಿದ್ದೇವೆ. ನಮ್ಮ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ದಸರಾಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅದನ್ನು ಬಿಟ್ಟರೆ ದಸರಾ ಉದ್ಘಾಟಕರ ವಿಚಾರ ಹಾಗೂ ಇತರ ಯಾವುದೇ ವಿಚಾರಗಳ ಬಗ್ಗೆ ಚರ್ಚೆಯಾಗಿಲ್ಲ” ಎಂದರು.”ಜಂಬೂ ಸವಾರಿಯ ದಿನ ಅರಮನೆ ಮುಂಭಾಗದಲ್ಲಿ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡುವಂತೆ ಪ್ರಮೋದಾದೇವಿ ಅವರು ಸಲಹೆ ನೀಡಿದ್ದಾರೆ. ಕಳೆದ ಬಾರಿ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಮಳೆ ಬಂದಿದ್ದರಿಂದ ಜನ ಅರಮನೆಗೆ ನುಗ್ಗಿದ್ದು, ಇದರಿಂದ ಗೊಂದಲ ಸೃಷ್ಟಿಯಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು.
Laxmi News 24×7