ಬೆಂಗಳೂರು : ಭೂ ಸುರಕ್ಷಾ ಯೋಜನೆ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಆದರೆ, ಬೆಂಗಳೂರು ನಗರ – ಗ್ರಾಮಾಂತರ ಜಿಲ್ಲೆಗಳಲ್ಲಿ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಭೂ ಸುರಕ್ಷಾ ಯೋಜನೆಯ ಅಡಿ ಭೂ ದಾಖಲೆಗಳು ಡಿಜಿಟಲೀಕರಣಗೊಳ್ಳುವ ಪ್ರಕ್ರಿಯೆ ಇಡೀ ರಾಜ್ಯದಲ್ಲೇ ಬೆಂಗಳೂರು ನಗರ – ಗ್ರಾಮಾಂತರ ಜಿಲ್ಲೆಗಳು ಕೆಟ್ಟ ದಾಖಲೆ ಹೊಂದಿದ್ದು, ಈ ಸಂಬಂಧ ಇಂದು ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಎಸಿ, ತಹಶೀಲ್ದಾರ್, ಡೆಪ್ಯೂಟಿ ತಹಶೀಲ್ದಾರ್ಗಳ ಸಭೆ ನಡೆಸಿದ ಸಚಿವರು, ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ.
ಆನ್‌ಲೈನ್ ಪ್ರಮಾಣೀಕರಣ ಸಮಸ್ಯೆ ( Online Certification issue) ವಿಚಾರವನ್ನು ತಹಶೀಲ್ದಾರರು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿದ್ದಾರೆ. ರಾಜ್ಯಾದ್ಯಂತ 21 ಲಕ್ಷ ಪುಟ ಸಮಸ್ಯೆ ಆಗಿದ್ದರೆ, ಬೆಂಗಳೂರು ನಗರ-ಗ್ರಾಮಾಂತರದಲ್ಲಿ ಕೇವಲ 27 ಪುಟ ಸಮಸ್ಯೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರ-ಗ್ರಾಮೀಣ ಜಿಲ್ಲೆಯ ತಹಶೀಲ್ದಾರರು ಕಚೇರಿಗೆ ಹೋಗಲ್ಲ, ನಿಮಗೆ ಬೇರೆಲ್ಲಿ ಕಚೇರಿ ಇದೆ ಎಂಬುದೇ ನಮಗೆ ಗೊತ್ತಿಲ್ಲ. ಇಲ್ಲಿವರೆಗೆ ನಾವೂ ಸಹಿಸಿಕೊಂಡಿದ್ದೇನೆ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ದಾರಿಗೆ ಬರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳಿಗೆ ತರಾಟೆ : ಅತಿ ಮಾತನಾಡಬೇಡ, ನೀನು ಯಾರತ್ರ ಮಾತಾಡ್ತಾ ಇದೀಯ ಅನ್ನೋ ಪ್ರಜ್ಞೆ ಇದಿಯಾ? ಎಂದು ತಹಶೀಲ್ದಾರ್, ಶಿರಸ್ತೇದಾರ್ಗಳ ಬೆವರಿಳಿಸಿದ ಸಚಿವರು, ತಮ್ಮ ಆಫೀಸಲ್ಲಿ ಏನ್ ನಡೀತಾ ಇದೆ ಅಂತ ತಹಶೀಲ್ದಾರ್ಗಳಿಗೇ ಗೊತ್ತಿಲ್ಲ ಅಂದ್ರೆ ಏನರ್ಥ?. ಕೆಲಸ ಮಾಡ್ರಿ ಅಂದ್ರೆ ನೆಪ ಹೇಳ್ತೀರಲ್ರಿ, ನಿಮಗೆ ನಾಚಿಕೆ ಆಗಲ್ವ? ಎಂದು ಪ್ರಶ್ನಿಸಿದ್ದಾರೆ.
ನಿಮಗೆ ನಾಚಿಕೆ ಇದೆಯಾ? ಎಂದು ತಹಶೀಲ್ದಾರ್ ವಿರುದ್ಧ ಗರಂ ಆದ ಸಚಿವರು, ತಹಶೀಲ್ದಾರ್ಗೆ ಕೆಸಿಎಸ್ಆರ್ ರೂಲ್ಸ್ ಗೊತ್ತಿಲ್ವ? ಯಾರ ಕಿವಿಗೆ ದಾಸವಾಳ ಇಡೋ ಪ್ರಯತ್ನ ಮಾಡ್ತಾ ಇದೀರಾ? ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಆನೇಕಲ್ ತಹಶೀಲ್ದಾರರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
Laxmi News 24×7