ಬೆಂಗಳೂರು : ಯುವಕನಿಗೆ ಮದ್ಯಪಾನ ಮಾಡಿಸಿ ಆತನ ಸ್ನೇಹಿತರೇ ಮತ್ತೊಂದು ಗ್ಯಾಂಗ್ನ ಮೂಲಕ ರಾಬರಿ ಮಾಡಿಸಿರುವ ಘಟನೆ ಚಿಕ್ಕಜಾಲ ವ್ಯಾಪ್ತಿಯಲ್ಲಿ ನಡೆದಿದೆ. ಚಂದನ್ ಎಂಬಾತನ ಚಿನ್ನದ ಸರ, ಕೈಕಡಗ ದರೋಡೆ ಮಾಡಲಾಗಿದ್ದು, ಕೊನೆಗೆ ಆತನೊಂದಿಗೆ ಸ್ನೇಹಿತರಾದ ಪವನ್ ಹಾಗೂ ಅಚಲ್ ಪೊಲೀಸ್ ಠಾಣೆಗೆ ತೆರಳಿ ದೂರು ಕೊಡಿಸಿದ್ದರು. ಆದರೆ ಪೊಲೀಸರ ತನಿಖೆಯ ವೇಳೆ ಚಂದನ್‌ನ ಸ್ನೇಹಿತರ ಕಳ್ಳಾಟ ಬಯಲಾಗಿದೆ.
ಪ್ರಕರಣದ ಹಿನ್ನೆಲೆ: ಸ್ನೇಹಿತರಾಗಿದ್ದ ಚಂದನ್, ಪವನ್ ಮತ್ತು ಅಚಲ್ ಕಳೆದ ತಿಂಗಳು ಚಿಕ್ಕಜಾಲದ ಪಬ್ವೊಂದಕ್ಕೆ ತೆರಳಿದ್ದರು. ಈ ವೇಳೆ ಚಂದನ್ಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ್ದ ಆರೋಪಿಗಳು, ನಂತರ ಆತನ ಕಾರಿನಲ್ಲಿ ಕರೆದೊಯ್ದಿದ್ದರು. ಮಾರ್ಗಮಧ್ಯೆ ಅಚಲ್, ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್ಗೆ ಫೋನ್ ಮಾಡಿ ಕರೆಸಿಕೊಂಡಿದ್ದ. ಸ್ಥಳಕ್ಕೆ ಬಂದಿದ್ದ ಪ್ರೇಮ್ ಶೆಟ್ಟಿ ತಂಡ ಮದ್ಯದ ಅಮಲಿನಲ್ಲಿದ್ದ ಚಂದನ್ಗೆ ಥಳಿಸಿ ಆತನ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿತ್ತು. ಹಲ್ಲೆಗೊಳಗಾಗಿದ್ದ ಚಂದನ್ ಜೊತೆ ಸ್ನೇಹಿತರಾದ ಪವನ್ ಹಾಗೂ ಅಚಲ್ ತೆರಳಿ ಚಿಕ್ಕಜಾಲ ಠಾಣೆಗೆ ದೂರು ನೀಡಿದ್ದರು.
ತನಿಖೆ ವೇಳೆ ಅನುಮಾನಗೊಂಡ ಪೊಲೀಸರು ಅಚಲ್‌ನ ಫೋನ್ ಕರೆಯ ವಿವರಗಳನ್ನು ಗಮನಿಸಿದಾಗ ಆತ ಪ್ರೇಮ್ ಶೆಟ್ಟಿ ಎಂಬಾತನಿಗೆ ಕರೆ ಮಾಡಿರುವುದು ತಿಳಿದು ಬಂದಿದೆ. ಪೊಲೀಸರಿಗೆ ಅನುಮಾನ ಬರುತ್ತಿದ್ದಂತೆ ಪವನ್ ಮತ್ತು ಅಚಲ್ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7