ದಾವಣಗೆರೆ: ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯ ಪ್ರಮುಖ ಆರೋಪಿ ಚಾವಳಿ ಸಂತೋಷ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬುಧವಾರ ಸ್ಥಳ ಮಹಜರ್ ವೇಳೆ ಬಾಲ ಬಿಚ್ಚಿದ್ದ ಚಾವಳಿ ಸಂತೋಷ್ ಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ನಗರದ ಆವರಗೆರೆ ಹೈಸ್ಕೂಲ್ ಬಳಿ ಈ ಘಟನೆ ನಡೆದಿದೆ.
ಕಣುಮಾ ಸಂತೋಷ್ ನ ಮರ್ಡರ್ ಮಾಡಲು ಉಪಯೋಗಿಸಿದ್ದ ಮೊಬೈಲ್ ನ್ನು ಆವರಗೆರೆ ಬಳಿಯ ಪ್ರದೇಶವೊಂದರ ಬಳಿ ಆರೋಪಿಗಳು ಎಸೆದು ಪರಾರಿ ಆಗಿದ್ದರು. ಸಿಟಿ ಡಿವೈಎಸ್ಪಿ ಶರಣ ಬಸವೇಶ್ವರ ಬಿ. ಅವರು ಸಿಬ್ಬಂದಿಯೊಂದಿಗೆ ಆವರಗೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಚಾವಳಿ ಸಂತೋಷ್ನನ್ನು ಸ್ಥಳ ಮಹಜರ್ ಗೆ ಕರೆದುಕೊಂಡು ತೆರಳಿದ್ದರು. ಈ ವೇಳೆ ಚಾವಳಿ ಸಂತೋಷ್ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅದರೂ ಪೊಲೀಸರ ಮಾತು ಕೇಳದ ಆರೋಪಿ ಚಾವಳಿ ಸಂತೋಷ್ ನ ಕಾಲಿಗೆ ಸಿಟಿ ಡಿವೈಎಸ್ಪಿ ಶರಣ ಬಸವೇಶ್ವರ ಅವರು ಗುಂಡು ಹೊಡೆದಿದ್ದಾರೆ.
ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯ: ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಅವರನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಆರೋಪಿಗೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಪಂಚನಾಮೆ ಮಾಡಲು ಆವರಗೆರೆ ಬಳಿ ಆರೋಪಿ ಚಾವಳಿ ಸಂತೋಷ್ ನನ್ನು ಕರೆದುಕೊಂಡು ಹೋದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ, ಗಾಳಿಯಲ್ಲಿ ಗುಂಡು ಹಾರಿಸಿದರು ಕೂಡ ಕೇಳದೆ ಇದ್ದಾಗ ಸಿಟಿ ಡಿವೈಎಸ್ಪಿ ಅವರು ಕಾಲಿಗೆ ಗುಂಡು ಹಾರಿಸಿದ್ದಾರೆ. ತನಿಖೆಗೆ ಅವಶ್ಯಕತೆ ಇರುವ ಮೊಬೈಲ್ ಅನ್ನು ಆವರಗೆರೆ ಬಳಿ ಎಸೆದಿದ್ದಾನೆ ಎಂದು ಪಂಚನಾಮೆ ಮಾಡಲು ತೆರಳಿದಾಗ ಈ ಘಟನೆ ನಡೆದಿದೆ. ಈ ಹಲ್ಲೆಯಲ್ಲಿ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿವೆ. ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದರು.
Laxmi News 24×7