ಬೆಂಗಳೂರು: “ರಾಜ್ಯದಲ್ಲಿ ಭ್ರಷ್ಟ ವ್ಯವಸ್ಥೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕೆಲಸ ಆಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಕಾಮಗಾರಿಗಳ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೇನೆ. ಗುಣಮಟ್ಟದ ಕೆಲಸ ಆಗುತ್ತಿಲ್ಲ ಎಂದಿದ್ದೇ ಅಷ್ಟೇ, ಬಿಜೆಪಿಯವರು ಅರ್ಧಂಬರ್ಧ ತಿಳಿದುಕೊಂಡು ಮಾತನಾಡುತ್ತಿದ್ದಾರೆ” ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, “ವರ್ಗಾವಣೆ ಒಂದು ದಂಧೆ ಆಗಿದೆ. ನಾನು ಸಿಎಂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಅಂತ ಹೇಳಿಲ್ಲ. ಎಲ್ಲಾ ಸರ್ಕಾರದಲ್ಲೂ ಭ್ರಷ್ಟಾಚಾರ ಇದೆ ಎಂದಿದ್ದೇನೆ. ಬಿಜೆಪಿಯವರು ನನ್ನ ಹೇಳಿಕೆ ತಪ್ಪಾಗಿ ತಿಳಿದಿದ್ದಾರೆ. ನಾನು ಏನು ಹೇಳಬೇಕೋ ಅದನ್ನು ಧೈರ್ಯವಾಗಿ ಹೇಳುತ್ತೇನೆ” ಎಂದರು.
“ನಾನು ಕೊಪ್ಪಳದಲ್ಲಿನ ಸಭೆಯೊಂದರಲ್ಲಿ ನಿನ್ನೆ ಮಾತನಾಡುವ ವೇಳೆ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಆಗಿದೆ ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ. ಮೊದಲನೆಯದಾಗಿ ನಾನು ಸ್ಪಷ್ಟವಾಗಿ ಹೇಳುವುದೇನೆಂದರೆ, ಇದು ನನ್ನ ಪತ್ರಿಕಾ ಹೇಳಿಕೆಯಲ್ಲ. ನಾನು ಯಾವುದೇ ಮಾಧ್ಯಮಗೋಷ್ಟಿ ಮಾಡಿ ಇಂತಹ ಹೇಳಿಕೆ ನೀಡಿಲ್ಲ. ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದ ಮಾತುಗಳನ್ನು ಮಾಧ್ಯಮಗಳಲ್ಲಿ ತಪ್ಪು ಅರ್ಥ ಬರುವ ರೀತಿಯಲ್ಲಿ ಬಿಂಬಿಸಲಾಗಿದೆ. ಇದಕ್ಕೆ ನಾನು ಜವಾಬ್ದಾರನಲ್ಲ” ಎಂದು ಹೇಳಿದರು.
“ಕೊಪ್ಪಳದಲ್ಲಿ, ಪ್ರಾದೇಶಿಕ ಅಸಮತೋಲನಾ ನಿವಾರಣೆಗಾಗಿನ ಡಿ.ಎಂ. ನಂಜುಂಡಪ್ಪ ವರದಿ ಕುರಿತು ಅಧ್ಯಯನ ನಡೆಸಲು ನೇಮಿಸಲಾದ ಸಮಿತಿಯು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿವರಣೆ ಪಡೆಯುವ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವಾಗ, ‘ಸರ್ಕಾರದ ಕಾಮಗಾರಿಗಳಲ್ಲಿ ಗುಣಮಟ್ಟದ ಕೆಲಸ ನಡೆಯುತ್ತಿಲ್ಲ. ಹಿಂದೆಲ್ಲಾ ಐದಾರು ದಶಕ ಬಾಳಿಕೆ ಬರುತ್ತಿದ್ದ ಸರ್ಕಾರಿ ಕಟ್ಟಡಗಳು 10 ವರ್ಷಗಳಲ್ಲಿಯೇ ಬಿದ್ದುಹೋಗುತ್ತಿವೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಹೇಗೆ ಸಾಧ್ಯವಾಗುತ್ತದೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಪೂರಕವಾಗುವಂತೆ ಸಮಿತಿಯು ತನ್ನ ವರದಿಯಲ್ಲಿ ನನ್ನ ಈ ಸಲಹೆಯನ್ನು ಉಲ್ಲೇಖಿಸಿಯೇ ಶಿಫಾರಸ್ಸುಗಳನ್ನು ಮಾಡಬೇಕೆಂದು’ ನಾನು ಹೇಳಿದ್ದೇನೆ” ಎಂದು ಸ್ಪಷ್ಟನೆ ನೀಡಿದರು.
Laxmi News 24×7