ಬೆಂಗಳೂರು : ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಬೇಕು ಎಂಬ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರದ ನಿರಾಕರಿಸಿದೆ.
ಉನ್ನತ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರಕ್ಕೆ ಜಿಲ್ಲೆಯ ಮರುನಾಮಕರಣ ಮಾಡಲು ಕೋರಿ ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆಯೇ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಳ್ಳಿಹಾಕಿದೆ. ಆದ್ರೆ, ಯಾವ ಕಾರಣದಿಂದ ನಿರಾಕರಿಸಲಾಗಿದೆ ಎಂಬುದನ್ನು ತಿಳಿಸಿಲ್ಲ.
ಆದರೆ, ಮೂಲಗಳು ತಿಳಿಸುವಂತೆ, ಜಿಲ್ಲೆಯ ಹೆಸರು ಮರುನಾಮಕರಣಕ್ಕೆ ಸ್ಥಳೀಯ ನಿವಾಸಿಗಳಿಂದ ವಿರೋಧವಿದೆ ಎಂದು ಕೇಂದ್ರ ತಿಳಿಸಿದೆ. ಈ ವಿರೋಧದ ನಡುವೆ ಮುಂದುವರೆದಲ್ಲಿ ಅದು ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ತೊಡಕಾಗುವ ಸಾಧ್ಯತೆ ಇದೆ ಎಂದು ಕೂಡ ಉಲ್ಲೇಖಿಸಿದೆ.
ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ವಿಚಾರವನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೂಡ ಅಧಿಕೃತ ಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕ್ಯಾಬಿನೆಟ್ ನಿರ್ಧಾರದ ಬಳಿಕ ನಾವು ಈ ಕುರಿತು ಅನುಮತಿ ಪಡೆಯಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೆವು. ಈ ಸಂಬಂಧ ನಾವು ಉತ್ತರ ಪಡೆದಿದ್ದು, ಇದು ಸಕಾರಾತ್ಮಕವಾಗಿಲ್ಲ. ಈ ಪ್ರಸ್ತಾವನೆ ನಿರಾಕರಣೆಗೆ ಅವರು ನಿಖರ ಕಾರಣವನ್ನು ಸ್ಪಷ್ಟಿಪಡಿಸಿಲ್ಲ. ಈ ಹಿನ್ನೆಲೆ ರಾಜ್ಯ ಸರ್ಕಾರ ಈ ಮರುನಾಮಕರಣವನ್ನು ಕೆಲಕಾಲ ಮುಂದೂಡಲಿದೆ ಎಂದು ತಿಳಿಸಿದರು.
ಜಿಲ್ಲೆ ಹೆಸರು ಮರು ನಾಮಕರಣಕ್ಕೆ ಕೇಂದ್ರ ಅನುಮತಿ ಕಡ್ಡಾಯವೇ ಎಂಬ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾನೂನಿನ ಪ್ರಕಾರ, ಜಿಲ್ಲೆ ಅಥವಾ ಸ್ಥಳದ ಹೆಸರು ಮರುನಾಮಕಣಕ್ಕೆ ಕೇಂದ್ರದಿಂದ ಒಪ್ಪಿಗೆ ಬೇಕಿಲ್ಲ. ನನಗೆ ತಿಳಿದಿರುವಂತೆ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನೋಂದಣಿ ನಿರ್ವಹಣೆ ಮಾಡುವ ಉದ್ದೇಶದಿಂದ ಈ ಕುರಿತು ಕೇಂದ್ರದ ಗಮನಕ್ಕೆ ತರುತ್ತದೆ ಎಂದರು.
ಆದರೆ, ಈ ಕುರಿತು ಮಾತನಾಡಿರುವ ರಾಜ್ಯದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರ ಯಾವುದೇ ಸ್ಥಳ ಅಥವಾ ನಗರದ ಹೆಸರು ಬದಲಾವಣೆ ಮಾಡುವಾಗ ಕೇಂದ್ರದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯುವುದು ಅವಶ್ಯವಾಗಿದೆ. ಕೇಂದ್ರದ ಒಪ್ಪಿಗೆ ಹೊರತಾಗಿ ರಾಜ್ಯವು ಸ್ಥಳ ಅಥವಾ ನಗರದ ಹೆಸರು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಸ್ಥಳೀಯರು ಮತ್ತು ಜಿಲ್ಲಾ ಶಾಸಕ ಬೇಡಿಕೆ ಮೇರೆಗೆ ರಾಜ್ಯ ಸರ್ಕಾರ ಕಳೆದ ಜುಲೈ 2024ರಲ್ಲಿ ರಾಜ್ಯ ಸಂಪುಟ ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡರು. ಈ ಕ್ಯಾಬಿನೆಟ್ ಸಭೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಮನಗರ ಜಿಲ್ಲಾ ಶಾಸಕರ ತಂಡ ಈ ಕುರಿತು ಆಗ್ರಹಿಸಿತು.
Laxmi News 24×7