Breaking News

ಯುವಕನನ್ನು ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿ ವಿಡಿಯೋ ಮಾಡಿದ್ದ ಪ್ರಕರಣದ 19 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

Spread the love

ಮಂಗಳೂರು : ಯುವತಿಯೊಂದಿಗಿದ್ದ ಎಂದು ಯುವಕನನ್ನು ಕಾರಿನಿಂದೆಳೆದು ಹಲ್ಲೆಗೈದು, ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ವಿಡಿಯೋ ಮಾಡಿದ್ದ ಪ್ರಕರಣ ಸಂಬಂಧ 19 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಈ ಬಗ್ಗೆ ವಕೀಲ ಅರುಣ್ ಬಂಗೇರ ವಿವರಿಸಿದ್ದು, ಅತ್ತಾವರದ ಖಾಸಗಿ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿಯೊಂದಿಗೆ ಮಳಿಗೆಯ ವ್ಯವಸ್ಥಾಪಕ ಕಾರಿನಲ್ಲಿ ಹೋಗುತ್ತಿದ್ದ. ಆತನ ಕಾರನ್ನು ಅತ್ತಾವರ ನಂದಿಗುಡ್ಡೆ ಬಳಿ ಅಡ್ಡಗಟ್ಟಿದ್ದ ಹಿಂದೂ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾನೆಂದು ಆರೋಪಿಸಿ, ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. 2015ರ ಆಗಸ್ಟ್ 28ರಂದು ಘಟನೆ ನಡೆದಿತ್ತು.

ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ : ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಸಹೋದ್ಯೋಗಿ ಯುವತಿ 2 ಸಾವಿರ ಹಣ ಬೇಕೆಂದು ಕೇಳಿದ್ದಕ್ಕೆ ವ್ಯವಸ್ಥಾಪಕ ಅತ್ತಾವರ ಕೆಎಂಸಿ ಆಸ್ಪತ್ರೆಯ ಬಳಿ ತೆರಳಿ ಹಣ ಕೊಡಲು ಹೋಗಿದ್ದ. ಈ ವೇಳೆ ನಾಲ್ಕು ಬೈಕ್‌ಗಳಲ್ಲಿ ಬಂದ ಯುವಕರ ತಂಡ ಕಾರಿಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಆತನನ್ನು ಕಾರಿನಿಂದ ಎಳೆದು ಹಾಕಿ 10ರಿಂದ 12 ಮಂದಿ ಆರೋಪಿಗಳು ಸೇರಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಬಳಿಯಿದ್ದ ಎಟಿಎಂ ಕಾರ್ಡ್, ಎರಡು ಸಾವಿರ ನಗದು, ಮೊಬೈಲ್ ಕಿತ್ತುಕೊಂಡು ಹೋಗಿರುವುದಾಗಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

33 ಸಾಕ್ಷಿ ಹಾಜರುಪಡಿಸಿದರೂ ಸಾಬೀತಾಗದ ಆರೋಪ : ಬಳಿಕ ತನಿಖೆ ನಡೆಸಿದ ಪೊಲೀಸರು 19 ಮಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ 78 ದಾಖಲೆ, 33 ಸಾಕ್ಷಿಗಳನ್ನು ಹಾಜರುಪಡಿಸಿದರೂ ಪೊಲೀಸರಿಗೆ ಆರೋಪ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ, 19 ಜನ ಆರೋಪಿಗಳನ್ನು ಖುಲಾಸೆಗೊಳಿಸಿ ಮಾರ್ಚ್​​ 15ರಂದು ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಆದೇಶಿಸಿದ್ದಾರೆ.

ಆರೋಪಿಗಳ ಪರ ವಕೀಲರಾದ ಬಿ.ಅರುಣ ಬಂಗೇರ, ಮೋಹನರಾಜ್ ಕೆ.ಆ‌ರ್., ಆಶಾ ನಾಯ್ಕ ಸುನೀಲ್ ಮತ್ತು ರಿಹಾನ ಪರ್ವೀನ್ ವಾದ ಮಂಡಿಸಿದ್ದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ