ಬೆಂಗಳೂರು, ಜೂ.7- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಈತನಕ ಯಾವುದೇ ಅಭ್ಯರ್ಥಿ ತನ್ನ ಉಮೇದುವಾರಿಕೆಯನ್ನು ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಸಲು ಜೂ.9 ಕೊನೆಯ ದಿನವಾಗಿದ್ದು, ಬಹುತೇಕ ನಾಳೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.
ರಾಜ್ಯಸಭೆಯ ನಾಲ್ಕೂ ಸ್ಥಾನಗಳಿಗೆ ಜೂ.19ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಹೊರತುಪಡಿಸಿ ಇತರೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇದುವರೆಗೆ ಅಧಿಕೃತವಾಗಿ ಪ್ರಕಟಿಸಿಲ್ಲ.
ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆಯ ದಿನವಾಗಿರುವುದರಿಂದ ನಾಳೆ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್‍ನಿಂದ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ.
ಉದ್ಯಮಿ ಪ್ರಕಾಶ್ ಶೆಟ್ಟಿ, ಮಾಜಿ ಸಂಸದ ರಮೇಶ್ ಕತ್ತಿ, ಸಂಸದ ಪ್ರಭಾಕರ್ ಕೋರೆ ಅವರ ಹೆಸರುಗಳನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿಯು ಪಕ್ಷದ ಕೇಂದ್ರ ಸಮಿತಿಗೆ ಶಿಫಾರಸು ಮಾಡಿದೆ. ನಾಳೆಯೊಳಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
ಜೂ.10ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸು ಪಡೆಯಲು ಜೂ.12ರ ವರೆಗೂ ಕಾಲಾವಕಾಶವಿದೆ. 4ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಿದ್ದರೆ ಜೂ.19ರಂದು ಮತದಾನ ನಡೆಯಲಿದ್ದು, ಅಂದು ಸಂಜೆ ಮತ ಎಣಿಕೆ ನಡೆದು ಫಲಿತಾಂಶವೂ ಪ್ರಕಟವಾಗಲಿದೆ.