Breaking News

ಕಾವೇರಿ ನೀರು ವಿಚಾರವಾಗಿ ಕಮಲ-ದಳ ಜಂಟಿ ಹೋರಾಟ; ಸರ್ಕಾರಕ್ಕೆ ಬಿಎಸ್​ವೈ, ಹೆಚ್​ಡಿಕೆ ಎಚ್ಚರಿಕೆ ಸಂದೇಶ

Spread the love

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಜಂಟಿ ಪ್ರತಿಭಟನೆ ನಡೆಸಿದರು.‌ ಪ್ರತಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್​ ಅವರನ್ನು ಡಿಎಂಕೆ ಏಜೆಂಟ್ ಎಂದು ವಾಗ್ದಾಳಿ ನಡೆಸಿದರು.

 

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಳಿಕ ಇದು ಮೊದಲ ಜಂಟಿ ಹೋರಾಟವಾಗಿದ್ದು, ಧರಣಿಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ, ಡಿ ವಿ ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಬಿಜೆಪಿ ಸಂಸದರು, ಉಭಯ ಪಕ್ಷಗಳ ಶಾಸಕರು, ವಿಧಾನಪರಿಷತ್ ಸದಸ್ಯರು, ಉಭಯ ಪಕ್ಷದ ಪ್ರಮುಖರು ಭಾಗವಹಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದರು.

ಪ್ರತಿಭಟನೆಯಲ್ಲಿ ತಮಿಳುನಾಡು ಏಜೆಂಟ್ ಡಿಕೆಶಿಗೆ ಧಿಕ್ಕಾರ, ಬರಿದಾಯ್ತು ಕಾವೇರಿ.. ಹಾಳಾಯ್ತು ಬೆಂಗಳೂರು, ಕುಡಿಯುವ ನೀರಿಗೆ ಸಂಚಕಾರ ಮಾಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಜೀವ ನದಿ ಕಾವೇರಿಯ ನೀರು ನಮ್ಮದು ಎಂಬ ವಿವಿಧ ಘೋಷಣೆಗಳನ್ನು ಕೂಗಿದರು. ಸಿಎಂ, ಡಿಸಿಎಂ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ, ಡಿಸಿಎಂ ಡಿಎಂಕೆ ಏಜೆಂಟರಾಗಿದ್ದಾರೆ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್​ ಡಿಎಂಕೆ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿ ಎಸ್ ಯಡಿಯೂರಪ್ಪ ಕಿಡಿಕಾರಿದರು. ರೈತರ ಹೋರಾಟಕ್ಕೆ ಬಿಜೆಪಿ ಜೆಡಿಎಸ್ ಬೆಂಬಲ ನೀಡುತ್ತದೆ. ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಅಂದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಅದಕ್ಕೆ ನೀವೇ ಕಾರಣ ಆಗುತ್ತೀರ. ರಾಜ್ಯದ ಜನರ ಹಿತದೃಷ್ಟಿಯಿಂದ ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ.‌ ನಿಮ್ಮ ರಾಜಕೀಯ ನಾಟಕಕ್ಕೆ ಅವಕಾಶ ಕೊಡಲ್ಲ. ನಾಲ್ಕು ಲಕ್ಷ ಹೆಕ್ಟೇರ್ ತ‌ಮಿಳುನಾಡು ಬೆಳೆ ಬೆಳೆದಿದ್ದಾರೆ. ನೀವು ತ‌ಮಿಳುನಾಡಿನ ಏಜೆಂಟರಾಗಿ ವರ್ತನೆ ಮಾಡುತ್ತಿದ್ದಾರೆ. ಜನರ ರಕ್ಷಣೆಗೆ ಮುಂದಾಗದೇ ಇದ್ದರೆ ನಾವು ಹೋರಾಟ ಮಾಡುತ್ತೇವೆ. ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಗ್ಯಾರಂಟಿಯ ಭ್ರಮೆಯಲ್ಲಿದೆ : ಬಳಿಕ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಸರ್ಕಾರ ಗ್ಯಾರಂಟಿಯ ಭ್ರಮಾ ಲೋಕದಲ್ಲಿದೆ. ಅದು ಬಿಟ್ಟು ಬೇರೆ ಏನು ಕಾಣುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ‌. ನ್ಯಾಯ ದೊರಕುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದರು. ನಾಡಿನ ನೆಲ ಜಲ ರಕ್ಷಣೆ ಮಾಡಲು ಎಲ್ಲದಕ್ಕೂ ತಾರ್ಕಿಕ ಅಂತ್ಯ ಕಾಣಲು ನಾವು ಒಟ್ಟಿಗೆ ಹೋರಾಟ ಮಾಡುತ್ತೇವೆ.‌ ರೈತರ ಬದುಕಿನ ಪ್ರಶ್ನೆ ನಮ್ಮ ಮುಂದಿದೆ. ಇದರಲ್ಲಿ ರಾಜಕಾರಣ ಇಲ್ಲ. ಆದರೆ ಸಿಎಂ ಇಲ್ಲಿ ರಾಜಕೀಯ ಬೆರೆಸಲು ಮುಂದಾಗಿದ್ದಾರೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಸರ್ವ ಪಕ್ಷ ಸಭೆ ನಡೆಸಬೇಕು ಎಂದು ನಾವು ಒತ್ತಡ ಹಾಕಿದ ಬಳಿಕ ಸಭೆ ಕರೆದಿದ್ದರು. ಆದರೆ ನಮ್ಮ ಸಲಹೆಗಳನ್ನು ಯಾವುದನ್ನೂ ಪರಿಗಣಿಸಿಲ್ಲ. ಕೋರ್ಟ್ ಮುಂದೆ ಹೋಗಲು ಉಡಾಫೆ ಮಾಡಿದರು ಎಂದು ಟೀಕಿಸಿದರು.

ನೀರಾವರಿ ಸಚಿವರಿಗೆ ಬೆಂಗಳೂರಿನಲ್ಲಿ ವ್ಯವಹಾರ ಮಾಡಲು ಸಮಯ ಇಲ್ಲ. ಅವರಿಗೆ ನೀರಿನ ಬಗ್ಗೆ ಸಮಯ ಕೊಡಲು ಆಗುತ್ತಾ?. 10,000 ಕ್ಯೂಸೆಕ್​ಒಳಹರಿವು ಇದೆ ಎಂದು ಹೇಳುತ್ತಾರೆ. ಇದು ರಾಜ್ಯ ಸರ್ಕಾರದ ಉಡಾಫೆಗೆ ಹಿಡಿದ ಕನ್ನಡಿ. ಡಿಸಿಎಂ 3000 ಕ್ಯೂಸೆಕ್​ ನೀರು ಬಿಡಲು ಹೇಳಿರುವುದು ತೃಪ್ತಿ ತಂದಿದೆ ಎಂದಿದ್ದಾರೆ. ಮೆಟ್ಟೂರು ಅಣೆಕಟ್ಟಿನಲ್ಲಿ ಒಳ ಹರಿವು 6,450 ಕ್ಯೂಸೆಕ್​ ಇದೆ. ಹೊರ ಹರಿವು 7371 ಕ್ಯೂಸೆಕ್​ ಇದೆ. ಆದರೆ, ನಮಗೆ ಒಂದು ಬೆಳೆ ಬೆಳೆಯಲು ಆಗುತ್ತಿಲ್ಲ. ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಸ್ಥಳ ಪರಿಶೀಲನೆ ಮಾಡುವಂತೆ ಮನವಿ ಮಾಡಲು ಮೀನಾಮೇಷ ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯಲು ನೀರಿಲ್ಲ ಎಂದರು.


Spread the love

About Laxminews 24x7

Check Also

ಗ್ರಾಪಂ ಅಭಿವೃದ್ಧಿಗೆ ಸದಸ್ಯರ ಸಹಕಾರ ಅತ್ಯಗತ್ಯ

Spread the loveಆನೇಕಲ್​ : ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಎಲ್ಲರೂ ನೀಡಿದ ಸಹಕಾರ ಕಾರಣ ಎಂದು ಹೆನ್ನಾಗರ ಗ್ರಾಪಂ ಅಧ್ಯಕ್ಷ ಕೆ.ವಿನಯ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ