Breaking News

ಪಿಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ

Spread the love

ರಾಮನಗರ: ಕೋವಿಡ್‌-19 ಲಾಕ್‌ಡೌನ್‌ ಕಾರಣಕ್ಕೆ ಕಲಿಕೆಯಿಂದ ವಿಮುಖರಾಗಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯು ಆನ್‌ಲೈನ್‌ ಪಾಠ ಆರಂಭಿಸಿದೆ. ಈ ಮೂಲಕ ಮನೆಯಲ್ಲೇ ಕಲಿಕೆ ಮುಂದುವರಿಸುವ ಅವಕಾಶ ನೀಡಿದೆ.

 

ಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ವಿವಿಧ ವಿಷಯಗಳ ನುರಿತ ಉಪನ್ಯಾಸಕರಿಂದ ಪಠ್ಯದ ವಿವಿಧ ಅಧ್ಯಾಯಗಳನ್ನು ವಿಡಿಯೊ ರೂಪದಲ್ಲಿ ಸಂಗ್ರಹಿಸಿ ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಲಾಗುತ್ತಿದೆ. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮಗಳೆಡರಲ್ಲೂ ಈ ಪಾಠಗಳು ಲಭ್ಯವಿದೆ. ಕಳೆದ ಜುಲೈನಿಂದಲೇ ಈ ತರಗತಿಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಂಪರ್ಕ ಹೇಗೆ: ಇಲಾಖೆಯಲ್ಲಿನ ಉಪನ್ಯಾಸಕರಿಂದ ಪಠ್ಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಯೂಟ್ಯೂಬ್‌ಗಳಿಗೆ ಅಪ್‌ಲೋಡ್‌ ಮಾಡಲಾಗುತ್ತದೆ.

ಇಲಾಖೆಯಿಂದ ಉಪ ನಿರ್ದೇಶಕರಿಗೆ ಬರುವ ಪ್ರೀ-ವಿಡಿಯೋಗಳ ಲಿಂಕ್‍ನ್ನು ಪ್ರಾಚಾರ್ಯರ ಗುಂಪಿಗೆ ಕಳುಹಿಸಲಾಗುತ್ತದೆ. ಪ್ರಾಚಾರ್ಯರು ತಾವು ಕಾಲೇಜಿನಲ್ಲಿ ರಚಿಸಿಕೊಂಡಿರುವ ಉಪನ್ಯಾಸಕರ ಗುಂಪಿಗೆ ಕಳುಹಿಸುತ್ತಾರೆ. ಪ್ರತೀ ಕಾಲೇಜಿನಲ್ಲಿಯೂ ಆಯಾ ವಿಷಯಗಳ ಉಪನ್ಯಾಸಕರುಗಳು ಒಂದು ಪ್ರತ್ಯೇಕ ವಿದ್ಯಾರ್ಥಿ ವಾಟ್ಸಪ್‌ ಗುಂಪು ರಚಿಸಿರುತ್ತಾರೆ. ಈ ಲಿಂಕ್‌ಗಳನ್ನು ವಿದ್ಯಾರ್ಥಿಗಳ ಗುಂಪುಗಳಿಗೆ ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ಲಿಂಕ್‌ ಮೂಲಕ ವೀಕ್ಷಣೆ ಮಾಡುತ್ತಾರೆ.

ಯಾವ ಸಮಯದಲ್ಲಿ ಯಾವ ಪಾಠ ಪ್ರಸಾರವಾಗುತ್ತದೆ ಎಂದು ಇಲಾಖೆ ವಾರಕ್ಕೊಮ್ಮೆ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಅದರಂತೆಯೇ ಪ್ರತಿದಿನ ಪ್ರೀ-ವಿಡಿಯೊ ಲಿಂಕ್‍ಗಳನ್ನು ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿಯೇ ಮೊಬೈಲ್‌ ಗಳ ಮೂಲಕ ಈ ಪಠ್ಯಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಒಮ್ಮೆ ಅಪ್‌ಲೋಡ್‌ ಆದ ವಿಡಿಯೊ ಅನ್ನು ಯಾವಾಗ ಬೇಕಾದರೂ ವೀಕ್ಷಣೆ ಮಾಡಲು ಅವಕಾಶ ಇದೆ. ಒಂದೇ ಅಧ್ಯಾಯವನ್ನು ಪುನರಾವರ್ತಿತವಾಗಿ ನೋಡಿ ಗ್ರಹಿಸಬಹುದಾಗಿದೆ. ಕೆಲವು ವಿಷಯಗಳಲ್ಲಿ ಲಿಖಿತ ಪಿಡಿಎಫ್ ಟಿಪ್ಪಣಿಗಳನ್ನು ನೀಡಲಾಗುತ್ತಿದೆ. ಪಾಠ ಕೇಳಿದ ವಿದ್ಯಾರ್ಥಿಗಳು ಅರ್ಥವಾಗದ ಭಾಗವನ್ನು ಆಯಾ ವಿಷಯದ ಉಪನ್ಯಾಸಕರಿಗೆ ನೇರವಾಗಿ ದೂರವಾಣಿ ಕರೆ ಮಾಡಿ ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಉಪನ್ಯಾಸಕರಿಂದ ನಿಗಾ: ಮಕ್ಕಳು ಪ್ರತಿ ಅಧ್ಯಾಯದ ವಿಡಿಯೊಗಳನ್ನು ನೋಡಿದ್ದಾರೆಯೇ? ಅದು ಅರ್ಥವಾಗಿದೆಯೇ, ಇಲ್ಲವೇ ಎಂಬುದನ್ನು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕರೆಮಾಡಿ ಇಲ್ಲವೇ ಸಂದೇಶ ಕಳುಹಿಸಿ ತಿಳಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಅಧ್ಯಾಯಕ್ಕೆ ಇಲಾಖೆ ನೀಡಿರುವ ಪ್ರಶ್ನೆಬ್ಯಾಂಕ್‍ನಲ್ಲಿ ಆಯ್ದ ಪ್ರಶ್ನೆಗಳ ಪತ್ರಿಕೆ ತಯಾರಿಸಿ, ವಿದ್ಯಾರ್ಥಿಗಳಿಗೆ ಕಳುಹಿಸಿ, ಉತ್ತರಗಳನ್ನು ಲಿಖಿತವಾಗಿ ಬರೆದು, ಗುಂಪಿನಲ್ಲಿ ಅಥವಾ ಇ-ಮೇಲ್‍ಗೆ ಕಳುಹಿಸಿಲು ಸೂಚಿಸಲಾಗಿದೆ. ಉಪನ್ಯಾಸಕರು ಮೌಲ್ಯಮಾಪನ ಮಾಡಿ, ಅಂಕಗಳನ್ನು ನೀಡುವುದು, ತಪ್ಪು ಉತ್ತರಗಳಿಗೆ ಸರಿಯಾದ ಉತ್ತರವನ್ನು ಹೇಳಿಕೊಟ್ಟು, ಪುನಃ ಬರೆಯಲು ತಿಳಿಸಬೇಕಾಗಿದೆ. ಪ್ರತೀ ಅಧ್ಯಾಯವನ್ನು ಅರ್ಥ ಮಾಡಿಸುವ ನಿಟ್ಟಿನಲ್ಲಿ ಅಧ್ಯಾಪಕರು ಶ್ರಮವಹಿಸಿ ಕಲಿಸಲು ಒತ್ತು ನೀಡಲಾಗಿದೆ. ಈ ಎಲ್ಲಾ ಕಾರ್ಯಗಳನ್ನು ಪ್ರಾಚಾರ್ಯರ ಮೇಲುಸ್ತುವಾರಿಯಲ್ಲಿ ಮಾಡಿ, ಉಪ ನಿರ್ದೇಶಕರಿಗೆ ಅನುಪಾಲನ ವರದಿ ಸಲ್ಲಿಸಬೇಕಾಗಿದೆ.

“ಕೊರೊನಾ ವೈರಸ್ ವ್ಯಾಪಿಸುತ್ತಿರುವ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ನಿಲ್ಲಬಾರದು. ಪಠ್ಯಕ್ರಮದ ಬಗ್ಗೆ ಕನಿಷ್ಠ ಅರಿವಾದರೂ ಬೆಳೆಸಿಕೊಳ್ಳಬೇಕು ಎನ್ನುವ ಸದುದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಷ್ಟೋ ಮಕ್ಕಳ ಬಳಿ ಆಂಡ್ರಾಯ್ಡ್ ಮೊಬೈಲ್ ಇಲ್ಲ. ಅವರ ಪೋಷಕರಲ್ಲಿ ಇರುತ್ತದೆ. ಅದಕ್ಕಾಗಿ ಪಠ್ಯದ ವಿಡಿಯೊಗಳನ್ನು ಯುಟ್ಯೂಬ್‍ನಿಂದ ಡೌನ್‍ಲೋಡ್ ಮಾಡಿಟ್ಟುಕೊಂಡು ಮೊಬೈಲ್ ಲಭ್ಯವಾದಾಗ ನೋಡಲು ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ಗ್ರಾಮೀಣ ಪ್ರದೇಶದಲ್ಲಿ ಶೇ 40 ರಷ್ಟು ಮಕ್ಕಳಲ್ಲಿ ಮೊಬೈಲ್ ಇಲ್ಲ. ಕೆಲವರು ಆನ್‍ಲೈನ್ ತರಗತಿ ಶುರುವಾಗಿರುವ ಮಾಹಿತಿ ಪಡೆದು ಖರೀದಿಸಿದ್ದಾರೆ. ಮತ್ತೆ ಕೆಲವರು ಇನ್ನೂ ತೆಗೆದುಕೊಂಡಿಲ್ಲ. ಅಂತಹವರಿಗೂ ಅನಾನುಕೂಲವಾಗದಂತೆ ಕಾಲೇಜು ಆರಂಭವಾದಾಗ ಮೊದಲ ಅಧ್ಯಾಯದಿಂದಲೇ ಪಾಠ ಹೇಳಿಕೊಡಲು ಉಪನ್ಯಾಸಕರಿಗೆ ತಿಳಿಸಿದ್ದೇವೆ. ಎಲ್ಲಾ ಕಾಲೇಜುಗಳಲ್ಲೂ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲು ತಿಳಿಸಲಾಗಿದೆ’ ಎನ್ನುತ್ತಾರೆ ಇಲಾಖೆಯ ಉಪ ನಿರ್ದೇಶಕಿ ಸಿ.ಎಲ್.ಶೈಲಜಾ.


Spread the love

About Laxminews 24x7

Check Also

ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ನಿವೃತ್ತ ಶಿಕ್ಷಕನ ಹತ್ಯೆ

Spread the loveಬೆಂಗಳೂರು, (ಡಿಸೆಂಬರ್ 03): ಸುದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದ ಶಿಕ್ಷಕರೊಬ್ಬರು ಕನಸಿನ ಮನೆ ಕಟ್ಟಲು ಹಣ ಡ್ರಾ ಮಾಡಿಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ