ಬೆಂಗಳೂರು: ಮಹಾಮಾರಿ ಕೊರೊನಾದ ಅಬ್ಬರದ ಹೊತ್ತಲ್ಲೇ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ನಿರ್ಮಾಣವಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ ಮೂವರು ನಾಯಕರು ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕ ಪ್ರಭಾವಿ ನಾಯಕರಾದ ಉಮೇಶ್ ಕತ್ತಿ, ಮುರಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ವ್ಯೂಹ ರಚಿಸಿದ್ದಾರೆ. ಈ ಮೂವರ ನಾಯಕತ್ವದಲ್ಲಿ ಕಳೆದ 15 ದಿನದಲ್ಲಿ ಸುಮಾರು ಆರು ಬಾರಿ ಸಭೆ ನಡೆಸಿ, ಸಿಎಂ ವಿರುದ್ಧದ ಆಪರೇಷನ್ ವೇದಿಕೆಯನ್ನು ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ.
ಇದೀಗ ತಮ್ಮ ವಿರುದ್ಧ ಆಪ್ತರ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಸಿಎಂ ಯಡಿಯೂರಪ್ಪಗೆ ತಿಳಿದು ಬಂದಿದೆ. ಸಭೆ ಬೆನ್ನಲ್ಲೇ ಇಂದು ಬೆಳಗ್ಗೆ ಮುರುಗೇಶ್ ನಿರಾಣಿಗೆ ಸಿಎಂ ಕರೆ ಮಾಡಿದ್ದಾರೆ. ಆಪ್ತರ ಅಸಮಾಧಾನ ಕೇಳಲು ಸಿಎಂ ಯಡಿಯೂರಪ್ಪ ಕರೆ ಮಾಡಿದ್ದರು ಎನ್ನಲಾಗಿದೆ.
ಈ ವೇಳೆ ಮಾತನಾಡಿದ ನಿರಾಣಿ, ಯಾವ ಸಭೆಯೂ ಮಾಡಿಲ್ಲ, ಎಲ್ಲ ವದಂತಿ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆಗ ಉಮೇಶ್ ಕತ್ತಿಯ ಜೊತೆ ಮನೆಗೆ ಬರುವಂತೆ ನಿರಾಣಿಗೆ ಯಡಿಯೂರಪ್ಪ ತಿಳಿಸಿದ್ದಾರೆ. ರಹಸ್ಯ ಸಭೆಯ ಮಾಹಿತಿ ಸೋರಿಕೆ ಬಳಿಕ ಬಂಡಾಯ ನಾಯಕರು ಪರಸ್ಪರ ಅಂತರ ಕಾಯ್ದುಕೊಂಡಿದ್ದು, ಸಿಎಂ ಮಾತಿಗೆ ಸರಿಯಾಗಿ ಯಾವುದೇ ಉತ್ತರ ಕೊಡದೇ ಸಭೆ ನಡೆಸಿಲ್ಲ ಎಂದೇ ನಿರಾಣಿ ವಾದ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನಿರಾಣಿ ಹೇಳಿಕೆ?
ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದ ಬಗ್ಗೆಮಾತನಾಡಿದ್ದ ಮುರುಗೇಶ್ ನಿರಾಣಿ, ನಾನೇನು ಸನ್ಯಾಸಿ ಅಲ್ಲ. ನನಗೂ ಸಚಿವ ಸ್ಥಾನದ ಮೇಲೆ ಆಸೆ ಇದೆ. ನಾನು ಅಸಮಾಧಾನಿತರ ನೇತೃತ್ವ ವಹಿಸಿದ್ದೇನೆ ಎನ್ನುವುದು ಸುಳ್ಳು. ಕಳೆದ ಎರಡು ತಿಂಗಳಿಂದ ನಾನು ಯಾರೊಂದಿಗೂ ಕೂಡಿಲ್ಲ, ಬೆಂಗಳೂರಿಗೂ ಬಂದಿಲ್ಲ. ಬಂದರೂ ಕಮಿಟಿ ಮೀಟಿಂಗ್ ಮಾಡಿದ್ದೇವೆ ಅಷ್ಟೆ, ಅದನ್ನು ಮುಗಿಸಿ ಮತ್ಯಾರನ್ನೂ ಭೇಟಿ ಮಾಡಿಲ್ಲ. ತಪ್ಪು ಮಾಹಿತಿ ನೀಡಲಾಗಿದೆ. ಉಳಿದವರ ಬಗ್ಗೆ ನಾವು ಮಾತನಾಡುವುದಿಲ್ಲ, ಈ ಬಗ್ಗೆ ನನಗೆ ತಿಳಿದಿಲ್ಲ. ಮಂತ್ರಿ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನ ಇಲ್ಲ. ನಾನು ಸ್ಟೇಬಲ್ ಆಗಿದ್ದೇನೆ. ಈ ಕುರಿತು ನಾನು ಯಾವತ್ತೂ ಬಹಿರಂಗವಾಗಿ ಹೇಳಿಲ್ಲ ಎಂದು ಹೇಳಿದ್ದರು.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೂವರು ನಾಯಕರು ತಮ್ಮದೇ ಆದ ಪ್ರತ್ಯೇಕ ಬಣ ರಚಿಸಿಕೊಂಡು ಮುಂದೆ ಏನಾಗಬಹುದು ಎಂಬುದರ ಬಗ್ಗೆ ಆಪ್ತರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರಂತೆ. ಈ ನಡುವೆ ಪರಮಾಪ್ತ ಶಾಸಕನ ಎರಡ್ಮೂರು ಕೆಲಸಗಳಿಗೆ ಬ್ರೇಕ್ ಬಿದ್ದಿತ್ತು. ಈ ಕಾರಣದಿಂದಾಗಿ ಯಡಿಯೂರಪ್ಪ ಆಪ್ತ ಬಣವೇ ಯಡಿಯೂರಪ್ಪ ವಿರುದ್ಧ ಕೂಟ ರಚಿಸಲು ಯತ್ನಿಸಲಾಗ್ತಿದೆ ಎಂದು ತಿಳಿದು ಬಂದಿದೆ.