ಮುಂಬಯಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಆರಂಭಿಕ ದಿನಗಳ ದೊಡ್ಡ ಯಶಸ್ಸೆಂದರೆ 2008ರ ಅಂಡರ್-19 ವಿಶ್ವಕಪ್ ಗೆಲುವು. ಆಗ ಕೊಹ್ಲಿ ಕಿರಿಯರ ತಂಡದ ಕಪ್ತಾನ. ಹೀಗಾಗಿ ಮುಂದೊಂದು ದಿನ ಇವರು ಸೀನಿಯರ್ ತಂಡವನ್ನು ಪ್ರವೇಶಿಸುವುದು ಖಾತ್ರಿಯಾಗಿತ್ತು. ಕೊಹ್ಲಿಯ ಅಂದಿನ ದಿನಗಳನ್ನು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ “ಕರ್ನಲ್’ ದಿಲೀಪ್ ವೆಂಗ್ಸರ್ಕಾರ್ ನೆನಪಿಸಿಕೊಂಡಿದ್ದಾರೆ.
ಆಸ್ಟ್ರೇಲಿಯದಲ್ಲಿ ನಡೆದ 2008ರ “ಎ’ ತಂಡಗಳ ಎಮರ್ಜಿಂಗ್ ಪ್ಲೇಯರ್ ಟೂರ್ನಿ ವೇಳೆ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡಿದ್ದರು. ನ್ಯೂಜಿಲ್ಯಾಂಡ್ ಎದುರಿನ ಆರಂಭಿಕ ಪಂದ್ಯದಲ್ಲೇ ಇನ್ನಿಂಗ್ಸ್ ಆರಂಭಿಸಿ, ಚೇಸಿಂಗ್ ವೇಳೆ ಭರ್ಜರಿ ಶತಕವೊಂದನ್ನು ಬಾರಿಸಿ ಅಜೇಯರಾಗಿ ಉಳಿದಿದ್ದರು. ಅವರ ಈ ಸಾಧನೆ ತನ್ನ ಮೇಲೆ ಪ್ರಭಾವ ಬೀರಿತು ಎಂಬುದಾಗಿ ವೆಂಗ್ಸರ್ಕಾರ್ ವೆಬ್ಸೈಟ್ ಲೈವ್ ಕಾರ್ಯಕ್ರವೊಂದರಲ್ಲಿ ಹೇಳಿದ್ದಾರೆ.
ಕೊಹ್ಲಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಅಂದೇ ನಿರ್ಧರಿಸಲಾಯಿತು. ಅವರ ಮನೋಬಲ ಅಮೋಘವಾಗಿತ್ತು. ಹೀಗಾಗಿ 2008ರ ಶ್ರೀಲಂಕಾ ಪ್ರವಾಸಕ್ಕೆಂದು ಅವರನ್ನು ಆಯ್ಕೆ ಮಾಡಿದೆವು. ಮುಂದಿನದು ಇತಿಹಾಸ’ ಎಂದು ಕೊಹ್ಲಿ ಅವರನ್ನು ಭಾರತ ತಂಡಕ್ಕೆ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ವೆಂಗ್ಸರ್ಕಾರ್ ಹೇಳಿದರು.