ಬೆಂಗಳೂರು – ಭರ್ಜರಿಯಾಗಿಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಉತ್ಸಾಹದಲ್ಲಿರುವ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ.ಶಿವಕುಮಾರ ಭಾನುವಾರ ಮೊದಲ ಹಂತದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಭಾನುವಾರ ಬೆಂಗಳೂರಿನ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಹೋಮ, ಹವನ ನಡೆಯಲಿದೆ. ತಮ್ಮ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಗೆ ಯಾವುದೇ ರೀತಿಯ ವಿಘ್ನಗಳು ಎದುರಾಗದಿರಲಿ ಎಂದು ಮತ್ತು ಕಾಂಗ್ರೆಸ್ ಮತ್ತೊಮ್ಮೆ ಉಚ್ಛ್ರಾಯ ಸ್ಥಿತಿಗೆ ತಲುಪಲಿ ಎನ್ನುವ ಆಶಯದೊಂದಿಗೆ ಹೋಮ, ಹವನ ನಡೆಯಲಾಗುತ್ತಿದೆ. ಈಗಾಗಲೆ ಹೋಮ ಕುಂಡಗಳು ಸಿದ್ಧವಾಗಿವೆ.
ಡಿ.ಕೆ.ಶಿವಕುಮಾರ ಅಧ್ಯಕ್ಷರಾಗಿ ನೇಮಕವಾದಾಗ್ಯೂ ಲಾಕ್ ಡೌನ್ ಕಾರಣದಿಂದಾಗಿ ಇನ್ನೂ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿ ಅಧಿಕಾರಿ ಸ್ವೀಕರಿಸುವ ಕಾರ್ಯಕ್ರಮ ನಡೆಸಿ, ರಾಜ್ಯಾದ್ಯಂತ ಸುಮಾರು 9 ಸಾವಿರ ಕಡೆ ಟಿವಿ ಸ್ಕ್ರೀನ್ ಮೇಲೆ ಕಾರ್ಯಕ್ರಮ ವೀಕ್ಷಿಸುವ ಅಪರೂಪದ ಕಾರ್ಯಕ್ರಮವನ್ನು ಅವರು ಯೋಜಿಸಿದ್ದರು. 3 ಬಾರಿ ಕಾರ್ಯಕ್ರಮ ದಿನ ಗೊತ್ತುಪಡಿಸಿ ರದ್ಧಾಗಿದೆ.
ಈಗ ಲಾಕ್ ಡೌನ್ ವಿಘ್ನ ಮುಗಿದ ನಂತರ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿರುವ ಅವರು, ಅತ್ಯಂತ ವ್ಯವಸ್ಥಿತವಾಗಿಯೇ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೇರುವ ರೀತಿಯಲ್ಲಿ ಸಂಘಟಿಸಲು ಮುಂದಾಗಿದ್ದಾರೆ. ತೀರಾ ಅಗ್ರೆಸ್ಸಿವ್ ಆಗಿ ಹೋಗದೆ, ಬಿಜೆಪಿ ಸರಕಾರದ ವೈಫಲ್ಯಗಳನ್ನೇ ಬಳಸಿಕೊಂಡು ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಲು ಅವರು ಯೋಚಿಸಿದ್ದಾರೆ. ಹಾಗಾಗಿ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಯುವಕರ ಪಡೆ ಕಟ್ಟಲು ನಿರ್ಧರಿಸಿದ್ದಾರೆ.
ತಮ್ಮ ಎಲ್ಲ ಯೋಚನೆಗಳಿಗೆ ಯಾವುದೇ ರೀತಿಯ ಅಡ್ಡಿ, ಆತಂಕ ಎದುರಾಗದಿರಲಿ ಎಂದು ಅವರು ಹೋಮ, ಹವನದಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮೊದ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಹೊಸ ಆಶಾಕಿರಣ ಡಿ.ಕೆ.ಶಿವಕುಮಾರ ಪ್ರಮಾಣ ಎಂದು?
ಡಿ.ಕೆ.ಶಿವಕುಮಾರ ಪದಗ್ರಹಣ ಕಾರ್ಯಕ್ರಮಕ್ಕೆ ಮತ್ತೆ ಗ್ರಹಣ