ಬೆಂಗಳೂರು, ರಾಜ್ಯದ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಸಾವಿರಾರು ನೌಕರರಿಗೆ ಕಳೆದ 8 ತಿಂಗಳಿನಿಂದ ವೇತನ ಬಂದಿಲ್ಲ. ರಾಜ್ಯದಲ್ಲಿ 6,081 ಗ್ರಾಮ ಪಂಚಾಯತ್‍ಗಳಿದ್ದು ಅದರಲ್ಲಿ ಕನಿಷ್ಠವೆಂದರೂ 50 ಸಾವಿರ ಮಂದಿ ಬಿಲ್ ಕಲೆಕ್ಟರ್, ವಾಟರ್ ಮೆನ್, ಅಂಕಿ ಅಂಶ ಸಂಗ್ರಾಹಕರು ಮತ್ತು ಅಟೆಂಡರ್ ಆಗಿ ಕರ್ತವ್ಯದಲ್ಲಿದ್ದಾರೆ.
ಇವರಲ್ಲಿ ಬಹುತೇಕ ಮಂದಿ ಲಾಕ್‍ಡೌನ್ ಸಮಯದಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಗ್ರಾಮಗಳಲ್ಲಿ ಜನರಲ್ಲಿ ಅರಿವು ಮೂಡಿಸುವುದು, ಆರೋಗ್ಯ ಕಿಟ್‍ಗಳನ್ನು ಪೂರೈಸುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದರು.
ಪಿಡಿಒಗಳಿಗೆ ವೇತನ ಬರುತ್ತಿದೆ, ಆದರೆ ಉಳಿದ ಸಿಬ್ಬಂದಿಗೆ ಕಳೆದ ಏಳೆಂಟು ತಿಂಗಳಿನಿಂದ ಬಂದಿಲ್ಲ .ಸರ್ಕಾರದಿಂದ ಹಣ ಬಿಡುಗಡೆಯಾಗಬೇಕಷ್ಟೆ ಎನ್ನುತ್ತಾರೆ ತುಮಕೂರು ಜಿಲ್ಲೆಯ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು.
ಸ್ಥಳೀಯವಾಗಿ ಸಂಗ್ರಹಿಸಲಾದ ಹಣದಿಂದ ಈ ಹಿಂದೆ ಗ್ರಾಮಪಂಚಾಯತ್ ನೌಕರರಿಗೆ ವೇತನ ನೀಡಲಾಗುತ್ತಿತ್ತು. ಅದರಲ್ಲಿ ಕಡಿಮೆಯಾದಾಗ 2018ರ ಮಾರ್ಚ್ ತಿಂಗಳಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸಿಬ್ಬಂದಿಗೆ ನೇರವಾಗಿ ವೇತನ ನೀಡಲಾರಂಭಿಸಿತು.
ಈ ಸಂಬಂಧ ತಾಲ್ಲೂಕಿನ ಮತ್ತು ಗ್ರಾಮ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರಲಾಗಿದೆ. ಈ ವಿಷಯ ಸರ್ಕಾರದ ಗಮನಕ್ಕೂ ಬಂದಿದೆ ಎಂದು ಗ್ರಾಮ ಪಂಚಾಯತ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೇಳಿದ್ದಾರೆ.