ಹೈದ್ರಾಬಾದ್: ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಸಿನಿಮಾ ರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಅಲ್ಲು ಸ್ಪಷ್ಟನೆ ಕೊಟ್ಟಿದ್ದಾರೆ.
ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಕ್ಷಣ. ಇಂಥ ಸುಂದರ ಸಿನಿಮಾದಲ್ಲಿ ನನ್ನ ಮಗಳಿಗೆ ಚೊಚ್ಚಲ ಅವಕಾಶ ನೀಡಿರುವುದಕ್ಕೆ ನಿರ್ದೇಶಕ ಗುಣಶೇಖರ್ ಅವರಿಗೆ ಧನ್ಯವಾದಗಳು. ನನ್ನ ಮಗಳು ಮೊದಲ ಸಿನಿಮಾದಲ್ಲೇ ಸಮಂತಾ ಅಕ್ಕಿನೇನಿ ಜೊತೆ ಅಭಿನಯಿಸಿದ್ದನ್ನು ನೋಡಲು ಖುಷಿ ಆಗುತ್ತದೆ. ಶಾಕುಂತಲಂ ತಂಡದ ಎಲ್ಲ ಕಲಾವಿದರು ಮತ್ತು ತಾಂತ್ರಿಕ ವರ್ಗಕ್ಕೆ ನನ್ನ ಶುಭ ಹಾರೈಕೆಗಳು ಎಂದು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾಗೆ 4ರ ಪ್ರಾಯ. ಈ ಪುಟಾಣಿಗೆ ಸಮಂತಾ ಅಕ್ಕಿನೇನಿ ನಟನೆಯ ಶಾಕುಂತಲಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಮಂತಾ ಅವರು ಶಕುಂತಲೆಯ ಪಾತ್ರ ಮಾಡಲಿದ್ದು, ಶಕುಂತಲೆ ಪುತ್ರ ಭರತನ ಪಾತ್ರಕ್ಕೆ ಅಲ್ಲು ಅರ್ಹಾ ಬಣ್ಣ ಹಚ್ಚಲಿದ್ದಾಳೆ. ಈ ಚಿತ್ರಕ್ಕೆ ಮಣಿಶರ್ಮಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಹಾಗೆ ಇಡೀ ಶಾಕುಂತಲಂ ಚಿತ್ರ ತಂಡ ಸೋಶಿಯಲ್ ಮೀಡಿಯಾ ಮೂಲಕ ಸ್ವಾಗತ ಕೋರಿದೆ.