ಬೆಂಗಳೂರು: ಲಾಕ್‌ಡೌನ್‌ನ ಕೆಲವು ವಿನಾಯ್ತಿಗಳು ಆರಂಭವಾಗುವುದು ಇದೇ 14 ರ ಬಳಿಕ. ಎಲ್ಲವು ಮುಗಿಯಿತು ಎಂದು ಇವತ್ತೇ ರಸ್ತೆಗೆ ಇಳಿಯುತ್ತಿರುವುದು ಸರಿಯಲ್ಲ. ಸ್ವಲ್ಪ ತಾಳ್ಮೆ ವಹಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಗುರುವಾರ ರಾತ್ರಿ ನಿರ್ಧಾರ ಪ್ರಕಟಿಸಿದ್ದರಿಂದ ಕೆಲವರು ಇವತ್ತಿನಿಂದಲೇ ಲಾಕ್‌ಡೌನ್ ತೆರವು ಮಾಡಲಾಗಿದೆ ಎಂದು ಭಾವಿಸಿ ರಸ್ತೆಗೆ ಇಳಿಯುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಕೋವಿಡ್ ಈಗಷ್ಟೇ ನಿಯಂತ್ರಣಕ್ಕೆ ಬರುತ್ತಿದೆ. ಇನ್ನು ಮೂರು ನಾಲ್ಕು ದಿನ ತಾಳ್ಮೆಯಿಂದ ಮನೆಯಲ್ಲೇ ಇರಬೇಕು. ಹೊರಗೆ ಬರಬಾರದು. ಪೊಲೀಸರೊಂದಿಗೆ ಸಹಕರಿಸಬೇಕು. ಅವರು ಬಲಪ್ರಯೋಗ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಜನ ಹೆಚ್ಚು ಸೇರುವ ಸ್ಥಳಗಳಿಗೆ ಲಾಕ್‌ಡೌನ್ ವಿನಾಯಿತಿ ನೀಡಿಲ್ಲ. ಮಾಲ್, ಬಾರ್, ರೆಸ್ಟೋರೆಂಟ್, ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಎಂದು ಅವರು ವಿವರಿಸಿದರು.
ಲಾಕ್‌ಡೌನ್ ತೆರವು ಮಾಡಿದ ಬಳಿಕ ಬೆಂಗಳೂರಿನಿಂದ ಹೊರಗೆ ಹೋಗಿರುವ ಬಹಳಷ್ಟು ಜನ ವಾಪಸ್ ಬರುತ್ತಾರೆ. ಇಂತಹ ಸಂದರ್ಭಗಳಲ್ಲಿ ಹೆಚ್ಚು ಜನರು ಸೇರುವುದರಿಂದ ರೈಲು ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಆರ್‌ಎಟಿ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದರು.
‘ಕಾಂಗ್ರೆಸ್‌ನಿಂದ ಕೋವಿಡ್ ನಿಯಮ ಉಲ್ಲಂಘನೆ’
ಕೋವಿಡ್ ಲಾಕ್‌ಡೌನ್ ಇರುವಾಗಲೂ ಮನೆಯಿಂದ ಹೊರಬಂದು ಪ್ರತಿಭಟನೆ ನಡೆಸುವ ಮೂಲಕ ನಿಯಮವನ್ನು ಉಲ್ಲಂಘಿಸಿದೆ ಎಂದು ಬಸವರಾಜಬೊಮ್ಮಾಯಿ ಟೀಕಿಸಿದರು.
ಅತ್ಯಂತ ಸೂಕ್ಷ್ಮ ಸಂದರ್ಭದಲ್ಲಿ ಬೆಲೆ ಏರಿಕೆ ವಿಚಾರದಲ್ಲಿ ಹೋರಾಟ ಮಾಡುವ ಅಗತ್ಯವೇನಿತ್ತು. ಇದು ಕಾಂಗ್ರೆಸ್ ಪಕ್ಷದ ನಕಾರಾತ್ಮಕ ರಾಜಕಾರಣಕ್ಕೆ ಸಾಕ್ಷಿ ಎಂದು ಅವರು ಹೇಳಿದರು.
ನೋಡಿ: Photos: ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಕಾಂಗ್ರೆಸ್ ಪಕ್ಷದ ನಾಯಕರು ಎಲ್ಲ ನೀತಿ-ನಿಯಮಗಳನ್ನು ಉಲ್ಲಂಘನೆ ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಮೊದಲು ಲಸಿಕೆ ಹಾಕಿಸಿಕೊಳ್ಳಿ ಎಂದರೆ, ಯಾಕೆ ಹಾಕಿಸಿಕೊಳ್ಳಬೇಕು ಎಂದು ಪ್ರಶ್ನಿಸುತ್ತಿದ್ದರು. ಮೊದಲು ಪ್ರಧಾನಿ ನರೇಂದ್ರ ಮೋದಿ ಲಸಿಕೆ ಹಾಕಿಸಿಕೊಳ್ಳಲಿ ಅಂದ್ರು. ಈಗ ಅವರ ವರಸೆಯೇ ಬದಲಾಗಿದೆ. ಲಸಿಕೆ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
Laxmi News 24×7