ಬೆಂಗಳೂರು: ಡಿಸಿಎಂ ಲಕ್ಷ್ಮಣ ಸವದಿ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸವದಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಅಭಿಯಾನ ನಡೆಸುತ್ತಿದ್ದಾರೆ.
ಈಗ ಈ ಪೋಸ್ಟ್ ಎಲ್ಲ ಕಡೆ ವೈರಲ್ ಆಗಿದ್ದು, ಈಗ ಬಿಜೆಪಿಯಲ್ಲಿ ಒಳಾಂಗಣ ರಾಜಕೀಯ ನಡೆಯುತ್ತಿದೆಯಾ ಎಂಬ ಅನುಮಾನಗಳು ಮೂಡಿವೆ. ಲಕ್ಷ್ಮಣ ಸವದಿಯವರು ದೆಹಲಿಗೆ ಹೋಗಿ ಕೇಂದ್ರ ನಾಯಕರನ್ನು ಭೇಟಿಯಾಗಿ ಬಂದ ನಂತರ ಈ ಪೋಸ್ಟ್ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಹಲವಾರು ಅನುಮಾನಗಳು ಮೂಡಿವೆ.
ಈಗ ಈ ಸೂಚನೆ ತಿಳಿದೇ ಸಿಎಂ ಯಡಿಯೂರಪ್ಪನವರು ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಗಳನ್ನು ನೀಡಿದ್ದು, ಈ ಮೂಲಕ ಯಡಿಯೂರಪ್ಪ ಉತ್ತರ ಕರ್ನಾಟಕದ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡುವ ಮೆಗಾ ಪ್ಲಾನ್ ಮಾಡಿದ್ದು, ಮುಂದಿನ ತಿಂಗಳು ಸಂಪುಟವನ್ನು ವಿಸ್ತರಣೆ ಮಾಡಿ ಸಿಎಂ ಆಗುವ ಕನಸು ಕಂಡಿರುವ ಸವದಿಗೆ ಶಾಕ್ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮುಂದಿನ ಸಿಎಂ ಲಕ್ಷ್ಮಣ್ ಸವದಿ ಎಂದು ಅಭಿಮಾನಿಗಳ ಅಭಿಯಾನ ವಿಚಾರದ ಬಗ್ಗೆ ಮಾತನಾಡಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ನನಗೆ ಅದರ ಬಗ್ಗೆ ಗೊತ್ತಿಲ್ಲ. ಆದರ ಆಗಲಿ ಪಾಪ ನಸೀಬ್ ಇದ್ರೆ ಲಕ್ಷ್ಮಣ್ ಸವದಿ ಸಿಎಂ ಆಗಲಿ ಎಂದು ಹೇಳಿದ್ದಾರೆ. ಜೊತೆಗೆ ಸಂಪುಟದಿಂದ ಲಕ್ಷ್ಮಣ್ ಸವದಿಗೆ ಕೊಕ್ ಕೊಟ್ಟು ರಮೇಶ್ ಜಾರಕಿಹೊಳಿಯವರನ್ನು ಯಡಿಯೂರಪ್ಪ ಡಿಸಿಎಂ ಮಾಡುತ್ತಾರೆ ಎಂಬ ವಿಚಾರಗಳು ಕೇಳಿಬರುತ್ತಿವೆ.