ಶಿವಮೊಗ್ಗ: 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವ ಘಟನೆ ಶಿವಮೊಗ್ಗ ಹೊಸನಗರ ಪಟ್ಟಣದಲ್ಲಿ ನಡೆದಿದೆ.
ಹೊಸನಗರದ ಸಾಗರ ರಸ್ತೆಯ ರಮಾನಂದ್ ಎಂಬವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಹಾವು ಪ್ರತ್ಯಕ್ಷವಾಗಿದ್ದು, ಮನೆಯ ಹೊರಗಡೆ ಇದ್ದ ನಾಯಿ ಹಾವನ್ನು ಕಂಡು ಬೊಗಳಲು ಆರಂಭಿಸಿದೆ. ಅಲ್ಲದೇ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ಸಹ ಹಾವನ್ನು ಕಂಡು ಹಾವು ಹಾವು ಎಂದು ಕೂಗಿದ್ದಾರೆ. ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಉರಗ ತಜ್ಞ ಸ್ನೇಕ್ ಕಿರಣ್ ನನ್ನು ಕರೆಯಿಸಿ ಸುಮಾರು 12 ಅಡಿ ಉದ್ದದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ನಾಗಪಂಚಮಿಯ ದಿನದಂದೇ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು ಕಾಕತಾಳೀಯ ಎನಿಸಿದೆ. ನಾಗಪಂಚಮಿ ದಿನವೇ ಹಾವು ಪ್ರತ್ಯಕ್ಷವಾಗಿದ್ದಕ್ಕೆ ನಾಗರೀಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುತೂಹಲದಿಂದ ಕಾಳಿಂಗ ಸರ್ಪವನ್ನು ವೀಕ್ಷಿಸಿದರು.