ಮಂಗಳೂರು: ನಾಡಿನೆಲ್ಲೆಡೆ ನಾಗರಪಂಚಮಿ. ಆದರೆ ಈ ಕೊರೊನಾ ನಾಗರಪಂಚಮಿ ಆಚರಣೆಗೂ ಅಡ್ಡಿಯಾಗಿದೆ. ನಾಗರಪಂಚಮಿ ದಿನವೇ ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್ ಆಗಿದೆ.
ಇಂದು ನಡೆಯುತ್ತಿರುವ ನಾಗರಪಂಚಮಿ ಪೂಜೆಗೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ದೇಗುಲ ಆಡಳಿತ ಮಂಡಳಿ ನಿರ್ಧರಿಸಿದೆ. ಸಾಮಾಜಿಕ ಅಂತರ ಕಾಪಾಡಲು ಕಷ್ಟಕರವಾಗುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ವರ್ಷ ನಾಗರಪಂಚಮಿಗೆ ಲಕ್ಷಾಂತರ ಭಕ್ತರಿಂದ ಪೂಜೆ ಸಲ್ಲಿಕೆಯಾಗುತ್ತಿತ್ತು. ಆದರೆ ಈ ಬಾರಿ ಅರ್ಚಕರಿಂದ ಮಾತ್ರ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ
ಮಂಗಳೂರಿನ ಇತಿಹಾಸ ಪ್ರಸಿದ್ಧ ಕುಡುಪು ದೇಗುಲಕ್ಕೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ನಾಗರ ಪಂಚಮಿಯ ದಿನದಂದು ಸೇವೆಗಳು, ಸೇವಾಪ್ರಸಾದ, ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆಗಳು ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿಯಿಂದ ಪ್ರಕಟಣೆ ಹೊರಡಿಸಿದೆ.
ಉತ್ತರ ಕರ್ನಾಟಕದ ಗ್ರಾಮ ಗ್ರಾಮಗಳಲ್ಲೂ ಕೊರೊನಾ ರಣಕೇಕೆ ಹಾಕುತ್ತಿರುವುದರಿಂದ ಗ್ರಾಮಸ್ಥರೇ ಎಚ್ಚರಿಕೆ ತೆಗೆದುಕೊಂಡಿದ್ದಾರೆ. ಚಿಕ್ಕೋಡಿಯಲ್ಲಿ ನಾಗರಪಂಚಮಿಯಂದು ಮದುವೆಯಾದ ಸಹೋದರಿಯರನ್ನ ತವರು ಮನೆಗೆ ಕರೆಸುವ ಸಂಪ್ರದಾಯ ಇದೆ. ಆದರೆ ಈ ಕೊರೊನಾದಿಂದ ಯಾರು ಪಂಚಮಿ ಹಬ್ಬಕ್ಕೆ ಪರ ಊರಿನವರನ್ನ ಕರೆಯಬಾರದು ಎಂದು ಡಂಗುರ ಸಾರಲಾಗಿದೆ.
ಮಹಾಮಾರಿ ಕೊರೊನಾದಿಂದಾಗಿ ಎಲ್ಲೆಡೆ ಪಂಚಮಿ ಹಬ್ಬ ಕಳೆಗುಂದಿದೆ. ಗದಗದಲ್ಲಿ ಜನ ತಮ್ಮ ತಮ್ಮ ಮನೆಯಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಒಟ್ಟಾರೆ ಹಬ್ಬಗಳ ಮೇಲೂ ಕೊರೊನಾ ಎಫೆಕ್ಟ್ ತಟ್ಟಿದೆ.