Breaking News

ಎಫ್‌ಡಿಎ: 2.49 ಲಕ್ಷ ಅಭ್ಯರ್ಥಿಗಳು ಹಾಜರು, ವಿಜ್ಞಾನ ವಿಷಯದ ಪ್ರಶ್ನೆಗಳೇ ಹೆಚ್ಚು!

Spread the love

ಬೆಂಗಳೂರು: ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ನೇಮಕಾತಿ ಪರೀಕ್ಷೆಯು ಭಾನುವಾರ ರಾಜ್ಯದಾದ್ಯಂತ 1,057 ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು. ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಈ ಪರೀಕ್ಷೆಯನ್ನು 2.49 ಲಕ್ಷ ಅಭ್ಯರ್ಥಿಗಳು ಬರೆದರು.

‘ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಗಣನೆಗೆ ತೆಗೆದುಕೊಂಡರೆ ಶೇ 66ರಷ್ಟು, ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡವರನ್ನು ಮಾತ್ರ ಪರಿಗಣಿಸಿದರೆ ಶೇ 92ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ. 2.68 ಲಕ್ಷ ಅಭ್ಯರ್ಥಿಗಳು ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ತಿಳಿಸಿದರು.

ವಿಜ್ಞಾನ ಪ್ರಶ್ನೆ ಹೆಚ್ಚು: ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಾಗಿದ್ದರಿಂದ ಕೆಲವು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಸಾಮಾನ್ಯ ಜ್ಞಾನದ 100 ಪ್ರಶ್ನೆಗಳಲ್ಲಿ 42ಕ್ಕೂ ಹೆಚ್ಚು ಪ್ರಶ್ನೆಗಳು ವಿಜ್ಞಾನಕ್ಕೆ ಸಂಬಂಧಿಸಿದವುಗಳಾಗಿವೆ. ಪದವಿಯಲ್ಲಿ ಕಲಾ ವಿಭಾಗದಲ್ಲಿ ಓದಿದವರಿಗೆ ಪ್ರಶ್ನೆಪತ್ರಿಕೆ ಕಠಿಣ ಎನ್ನಿಸಿತು’ ಎಂದು ಅಭ್ಯರ್ಥಿಯೊಬ್ಬರು ಹೇಳಿದರು.

‘ಪ್ರತಿ ಬಾರಿ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಾಗಿರುತ್ತಿದ್ದವು. ಈ ಸಲ ವಿಜ್ಞಾನ ವಿಷಯದ ಪ್ರಶ್ನೆಗಳು ಜಾಸ್ತಿ ಎನಿಸಿದ್ದರೂ, ಸಾಮಾನ್ಯ ಜ್ಞಾನ ವಿಭಾಗದ ಪ್ರಶ್ನೆಗಳೂ ಇದರಲ್ಲಿ ಸೇರಿದ್ದವು. ಸರಳ ವಿಜ್ಞಾನದ ಪ್ರಶ್ನೆಗಳೇ ಇದ್ದುದರಿಂದ ಕಠಿಣವೇನೂ ಇರಲಿಲ್ಲ’ ಎಂದು ವಿಜ್ಞಾನ ಹಿನ್ನೆಲೆಯ ಅಭ್ಯರ್ಥಿಯೊಬ್ಬರು ತಿಳಿಸಿದರು.

ಎಫ್‌ಡಿಎ ಪರೀಕ್ಷೆಯಲ್ಲಿ ವಿಜ್ಞಾನ ಪ್ರಶ್ನೆಗಳೇ ಹೆಚ್ಚಾಗಿದ್ದರ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಸ್ವಾರಸ್ಯಕರ ಚರ್ಚೆ ಆಯಿತು. ‘ಎಫ್‌ಡಿಎ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ವತಿಯಿಂದ ವಿಜ್ಞಾನ ದಿನದ ಶುಭಾಶಯಗಳು’ ಎಂದು ಒಬ್ಬರು ಪೋಸ್ಟ್‌ ಮಾಡಿದರೆ, ‘ಇದೇನು ಎಫ್‌ಡಿಎ ಎಕ್ಸಾಮೋ, ಮೆಡಿಕಲ್‌ ಎಕ್ಸಾಮೋ’ ಎಂದು ಕೆಲವು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಸಕಲ ಮುನ್ನೆಚ್ಚರಿಕೆ: 1,253 ಹುದ್ದೆಗಳಿಗೆ ನಡೆದ ಈ ಪರೀಕ್ಷೆಗೆ ಒಟ್ಟು 3.74 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಜ. 24 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣಕ್ಕೆ ಮುಂದೂಡಲಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಬೇರೆ ಯಾವುದೇ ಅಕ್ರಮಗಳಿಗೆ ಆಸ್ಪದವಾಗದ ರೀತಿಯಲ್ಲಿ ಆಯೋಗವು ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡಿತ್ತು.

ರಾಜ್ಯದ 433 ಕೇಂದ್ರಗಳನ್ನು ಸೂಕ್ಷ್ಮ ಎಂದು ಗುರುತಿಸಿ, ಈ ಕೇಂದ್ರಗಳ ಪ್ರತಿ ಕೊಠಡಿಯಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗಿತ್ತು. ಪರೀಕ್ಷಾ ಸಾಮಗ್ರಿಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಸಂಚಾರ ಪೊಲೀಸ್‌ ದಳಗಳನ್ನು ನಿಯೋಜಿಸಲಾಗಿತ್ತು.

ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್‌ ಫೋನ್‌ ನಿಷೇಧಿಸಲಾಗಿತ್ತು. ಮೈಕ್ರೋಚಿಪ್‌, ಬ್ಲೂ ಟೂತ್‌, ವೈಫೈ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣ ಅಥವಾ ಲೋಹದ ವಸ್ತುಗಳನ್ನೂ ನಿರ್ಬಂಧಿಸಲಾಗಿತ್ತು. ಹೆಣ್ಣು ಮಕ್ಕಳು ಧರಿಸಿಕೊಂಡು ಬಂದಿದ್ದ ಕಿವಿಯೋಲೆಗಳನ್ನೂ ಬಿಚ್ಚಿಸಿ ಇಡಲಾಯಿತು. ಪ್ರವೇಶ ಪತ್ರದೊಂದಿಗೆ ಯಾವುದಾದರೂ ಮೂಲ ದಾಖಲೆಯನ್ನು ಅಥವಾ ಗುರುತಿನ ಚೀಟಿಯನ್ನು ತಂದಿರದಿದ್ದ ಅಭ್ಯರ್ಥಿಗಳಿಗೆ ಕೆಲವು ಕೇಂದ್ರಗಳಲ್ಲಿ ವಾಪಸ್‌ ಕಳುಹಿಸಲಾಯಿತು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ