ಬೆಂಗಳೂರು: ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಜಮೀನು ಹಂಚಿಕೆಯಲ್ಲಿ ₹ 500 ಕೋಟಿ ಮೊತ್ತದ ಅವ್ಯಹಾರ ನಡೆದಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳುತ್ತಿರುವುದು ಕುರಿ ಕಾಯಲು ತೋಳ ಬಿಟ್ಟಂತೆ ಇದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ವಿಶ್ವನಾಥ್ ಈಗ ಬಿಡಿಎ ಉಳಿಸಲು ಹೊರಟಿರುವಂತಿದೆ. ಯಲಹಂಕದಲ್ಲಿ ಅವರು ಮಾಡಿರುವ ಲೂಟಿ ನಿಮಗೆ ಗೊತ್ತಿಲ್ಲವೆ’ ಎಂದು ಪ್ರಶ್ನಿಸಿದರು.
ಅಗ್ರಹಾರ ದಾಸರಹಳ್ಳಿಯಲ್ಲಿ 17 ಕುಟುಂಬಗಳು ಬೀದಿಗೆ ಬಿದ್ದಿವೆ. ನಡುಗುವ ಚಳಿಯಲ್ಲಿ ತಾಯಂದಿರು ಎಳೆಯ ಮಕ್ಕಳನ್ನು ರಸ್ತೆಯ ಮೇಲೆ ಮಲಗಿಸಿಕೊಂಡಿದ್ದಾರೆ. ಈ ಸರ್ಕಾರಕ್ಕೆ ಹೃದಯ ಇದೆಯೇ ಎಂದು ಕೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹ 750 ಕೋಟಿ ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಎಲ್ಲವನ್ನೂ ವಾಪಸ್ ಪಡೆಯಲಾಗಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಸಚಿವರಿಗೆ ಲೂಟಿ ಮಾಡಲು ಅವಕಾಶ ನೀಡಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಒಂದೂವರೆ ವರ್ಷದೊಳಗೆ ಭಾರಿ ಪ್ರಮಾಣದಲ್ಲಿ ಬೆಳೆದು ನಿಂತಿದ್ದಾರೆ ಎಂದರು.
Laxmi News 24×7