Breaking News
Home / Uncategorized / ಯಡಿಯೂರಪ್ಪ ಮೇಲೆ ಮತ್ತೆ ಹೆಚ್ಚಿದ ಮೀಸಲಾತಿ ಒತ್ತಡ: ಸಭೆ ನಡೆಸಿದ ಲಿಂಗಾಯಿತ ಮಠಾಧೀಶರು, ಒಬಿಸಿ ಸೇರ್ಪಡೆಗೆ ಆಗ್ರಹ

ಯಡಿಯೂರಪ್ಪ ಮೇಲೆ ಮತ್ತೆ ಹೆಚ್ಚಿದ ಮೀಸಲಾತಿ ಒತ್ತಡ: ಸಭೆ ನಡೆಸಿದ ಲಿಂಗಾಯಿತ ಮಠಾಧೀಶರು, ಒಬಿಸಿ ಸೇರ್ಪಡೆಗೆ ಆಗ್ರಹ

Spread the love

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಯಡಿಯೂರಪ್ಪ ಪರವಾಗಿ ನಿಂತಿರುವ ಮಠಾಧೀಶರ ಬಣ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತಿರುಗಿಬಿದ್ದಿದೆ. ಈ ಬೆಳವಣಿಗೆ ನಡುವೆ ವಿರಕ್ತ ವೀರಶೈವ ಸಮುದಾಯದ ಎಲ್ಲಾ ಮಠಗಳು ಒಂದೇ ಎಂಬುದನ್ನು ಎತ್ತಿ ತೋರಿಸಲು ನಗರದಲ್ಲಿಂದು ಸಭೆ ನಡೆಸಿದರು.

ರಾಷ್ಟ್ರೀಯ ವೀರಶೈವ ಲಿಂಗಾಯಿತ ಮಠಾಧೀಶರ ಒಕ್ಕೂಟದಿಂದ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ತೀವ್ರವಾಗಿರುವ ಬೆಳವಣಿಗೆ ನಡುವೆ ಬೆಂಗಳೂರಿನಲ್ಲಿ ಉಜ್ಜೈನಿ ಮತ್ತು ಶ್ರೀಶೈಲ‌ಪೀಠದ ಜಗದ್ಗುರುಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ವೀರಶೈವ ಲಿಂಗಾಯಿತ ಅಭಿವೃದ್ದಿ ಮಂಡಳಿ ಅಧ್ಯಕ್ಷ ಪರಮಶಿವಯ್ಯ, ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಸೇರಿದಂತೆ ನೂರಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೆಚ್ಚು ಒತ್ತಡ ಹೇರಿ ಹಿಂಸೆ ಕೊಡಲಾಗುತ್ತಿದೆ. ಒಂದು ಕಡೆ ಕುರುಬರು ಮತ್ತೊಂದು ಕಡೆ ವಾಲ್ಮೀಕಿಗಳು ಇನ್ನೊಂದು ಕಡೆ ನಾವು ಅವರಿಗೆ ಹಿಂಸೆ ನೀಡುತ್ತಿದ್ದೇವೆ. ಅವರು ಹಿಂಸೆಯ ನಡುವೆಯೂ ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದಾರೆ. ಕೊರೋನಾ ಸಂಕಷ್ಟದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ತುಂಬಾ ಕುಸಿದಿದೆ. ಇಂತಹ ಸಂಕಷ್ಟದಲ್ಲಿ ಬಜೆಟ್ ಮಂಡನೆಯ ಸವಾಲು ಅವರ ಮೇಲಿದೆ. ಆದರೂ ಫೆಬ್ರವರಿ 18,-19 ರಂದು ಪ್ರಮುಖ‌ ಮಠಾಧೀಶರ ನಿಯೋಗವನ್ನು ಭೇಟಿ ಮಾಡಿ ಮನವಿ ಸ್ವೀಕರಿಸಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ ಎಂದರು.

ಲಿಂಗಾಯಿತ ಅಭಿವೃದ್ದಿ ಮಂಡಳಿ ಅಧ್ಯಕ್ಷನಾಗಿ ನಾನು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಪಂಚಮಸಾಲಿ ಸಮಾಜಕ್ಕೆ ಸೇರಿದನಾದ ನಾನು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ವಿರೋಧಿಸುವುದಿಲ್ಲ. ವೀರಶೈವ ಲಿಂಗಾಯಿತರ 106 ಒಳಪಂಗಡಗಳಿಗೆ ಒಬಿಸಿ ಮಾನ್ಯತೆ ದೊರೆತಿದೆ.. ಹಾಗಾದರೆ ಉಳಿದವರ ಕಥೆ ಏನು ಎಂದು ನಾವು ಕೇಳಬೇಕು. ಕೇಳದೇ ಇದ್ದರೆ ಸರ್ಕಾರ ಕೊಡುವುದಿಲ್ಲ. ಹಾಗಾಗಿ ವೀರಶೈವ ಲಿಂಗಾಯಿತರ ಎಲ್ಲ ಒಳಪಂಗಡಗಳನ್ನು ಒಬಿಸಿಗೆ ಸೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ಎಲ್ಲಾ ಪಂಚಪೀಠಾಧೀಶ್ವರರು ಹಾಗೂ ವಿರಕ್ತ ಮಠಗಳ ಪೀಠಾಧೀಶ್ವರರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಎಲ್ಲ ಒಂದೇ ಎಂದು ತೋರಿಸಲು ಈ ಸಭೆ ಸೇರಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.

ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಮಾತನಾಡಿ, ಮೀಸಲಾತಿ ಹೋರಾಟದ ವಿಷಯದಲ್ಲಿ ವೀರಶೈವ-ಲಿಂಗಾಯಿತರು ಗೊಂದಲಕ್ಕೆ ಒಳಗಾಗಿದ್ದಾರೆ. ಮೀಸಲಾತಿ ಹೋರಾಟದ ಕಾರಣಕ್ಕೆ ವೀರಶೈವಲಿಂಗಾಯಿತ ಸಮಾಜ ಒಡೆಯಬಾರದು. ಈ ಸಭೆಗೆ ನಾನು ಆಗಮಿಸಿದ್ದು ಆಕಸ್ಮಿಕ. ಸಭೆಗೆ ಬರಲೇಬೇಕು ಎಂದು ಪರಮಶಿವಯ್ಯನವರು ಒತ್ತಾಯಿಸಿದ್ದರು. ಜತೆಗೆ ಸಿದ್ದಗಂಗಾಶ್ರೀಗಳು ಸಹ ತಮ್ಮ ಪತ್ರವನ್ನು ನನ್ನ ಮೂಲಕ ಸಭೆಗೆ ಕಳುಹಿಸಿದ್ದಾರೆ. ಒಂದು ತಿಂಗಳ ಹಿಂದೆ ವಚನಾನಂದ ಶ್ರೀಗಳನ್ನು ಭೇಟಿಯಾದಾಗ ವೀರಶೈವ-ಲಿಂಗಾಯಿತರು ಒಂದಾಗಿರಬೇಕು ಎಂದು ಸಲಹೆ ಮಾಡಿದ್ದರು. ಜಯಮೃತ್ಯುಂಜಯಸ್ವಾಮೀಜಿ ಹಾಗೂ ವಚನಾನಂದ ಶ್ರೀಗಳು ಹೋರಾಟ ಮಾಡುತ್ತಿರುವುದು ಸರಿಯಾಗಿದೆ. ಆದರೆ ಅವರು ‌ಒಂದು ಪಂಗಡದ ಪರವಾಗಿ ಮಾತ್ರ ಹೋರಾಟ ಮಾಡುತ್ತಿರುವುದು ನಮಗೆ ನೋವು ತಂದಿದೆ. ಪಂಚಮಸಾಲಿಗಳು ಮತ್ತೊಬ್ಬರೋ ನಮಗೆ ಗೊತ್ತಿಲ್ಲ. ಆದರೆ ನಾವೆಲ್ಲ ವೀರಶೈವ ಲಿಂಗಾಯಿತರು. ಆದರೆ ಹಿಂದಿನ‌ ಮುಖ್ಯಮಂತ್ರಿಗಳು ಹೇಗೆ ನಮ್ಮ ವೀರಶೈವ ಲಿಂಗಾಯಿತ ಸಮಾಜವನ್ನು ಒಡೆಯಲು ‌ಪ್ರಯತ್ನಿಸಿದ್ದರು, ಆದರೆ ಈಗಿನ ಮುಖ್ಯಮಂತ್ರಿಗಳು ಹೇಗೆ ವೀರಶೈವ ಲಿಂಗಾಯಿತರನ್ನು ‌ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪ ಅವರು ವೀರಶೈವ ಲಿಂಗಾಯಿತರು ಎಂಬ ಕಾರಣಕ್ಕೆ ನಮ್ಮನ್ನು ಒಬಿಸಿಗೆ ಸೇರ್ಪಡೆ ಮಾಡುವ ಶಿಫಾರಸ್ಸು ಮಾಡಿ ಎಂದು ನಾವು ‌ಕೇಳುವುದಿಲ್ಲ. ಆದರೆ ವೀರಶೈವ ಲಿಂಗಾಯಿತರ ಪರಿಸ್ಥಿತಿಯನ್ನು ಅವಲೋಕನ‌ ಮಾಡಿ ಬಳಿಕ ಶಿಫಾರಸ್ಸು ಮಾಡಿ, ರಾಜ್ಯ ಸರ್ಕಾರದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸದೆ ಪರಿಗಣಿಸಿ ಜಾರಿಗೊಳಿಸಬೇಕು ಎಂದರು.

ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡಲು ಅಡ್ಡಿಯಾಗಿದ್ದು ಕೇಂದ್ರ ಸರ್ಕಾರ. ಬಿಜೆಪಿ ಅಧಿಕಾರಕ್ಕೆ ಬರಲು ಬಹುಸಂಖ್ಯಾತ ವೀರಶೈವಲಿಂಗಾಯಿತರ ಬೆಂಬಲ ಕಾರಣವಾಗಿದೆ. ಈಗ ವೀರಶೈವ ಲಿಂಗಾಯಿತರಿಗೆ ಅನ್ಯಾಯವಾದರೆ ಅದರ ಪರಿಣಾಮ ಏನಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು.
ಜತೆಗೆ ಈ ಹೋರಾಟದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಪ್ರಮುಖ ಮಠಗಳ ಸ್ವಾಮಿಗಳು ಬಾಯಿಮುಚ್ಚಿ ಕೂರಬಾರದು. ನಿಮ್ಮ ನಿಲುವು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಸಿಂದಗಿ ಸಾರಂಗಮಠದ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯಿತರನ್ನು ಒಡೆಯಲು ದೊಡ್ಡ ಹುನ್ನಾರ ನಡೆಯುತ್ತಿದೆ. ಜನಾಂಗದವರು ಸರ್ಕಾರಿ ಸವಲತ್ತು ಪಡೆಯಲು ಲಿಂಗಾಯಿತ ಎಂಬುದನ್ನೇ ಮರೆತು ಹಿಂದು ಗಾಣಿಗ, ಹಿಂದು ಬಣಜಿಗ ಎಂದಷ್ಟೇ ಜಾತಿ ಕಾಲಂ ನಲ್ಲಿ ಬರೆಸುತ್ತಿದ್ದಾರೆ. ನಮ್ಮನ್ನು ಒಬಿಸಿಗೆ ಸೇರ್ಪಡೆ ಮಾಡಬೇಕು ಎಂಬುದು ಬಹಳ ವರ್ಷದ ಬೇಡಿಕೆ ಎಂದರು.

ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಹಕ್ಕೊತ್ತಾಯ. ಪಂಚಮಸಾಲಿ ಸಮುದಾಯದ ಸ್ವಾಮೀಜಿ ಜೊತೆಗೆ ಮಾತಾಡಿದ್ದೇವೆ.
ದಿಕ್ಕು ತಪ್ಪಿಸುವುದಿಲ್ಲ. ನಾವು ಒಟ್ಟಿಗೆ ಹೋಗುತ್ತಿದ್ದೇವೆ, ನಾವು ಅವರ ಪಾದಯಾತ್ರೆಯಲ್ಲಿ ಇಂದು ಭಾಗವಹಿಸುತ್ತಿದ್ದೇವೆ. ಪರಮಪೂಜ್ಯರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದರು.


Spread the love

About Laxminews 24x7

Check Also

ನಕಲಿ ದಾಖಲೆ ಸೃಷ್ಟಿ; ಹದಿನೇಳು ಮಂದಿ ವಿರುದ್ಧ ಪ್ರಕರಣ

Spread the love ಹೊಸಪೇಟೆ (ವಿಜಯನಗರ): ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿ ಸರ್ಕಾರಕ್ಕೆ ವಂಚಿಸಿರುವ ದೂರಿನ ಮೇರೆಗೆ ಇಲ್ಲಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ