ಪುಣೆ, ಜನವರಿ 21: ಕೊರೊನಾ ವೈರಸ್ ಲಸಿಕೆ ಕೋವಿಶೀಲ್ಡ್ ಸೇರಿದಂತೆ ಅನೇಕ ಪ್ರಮುಖ ಲಸಿಕೆಗಳನ್ನು ಉತ್ಪಾದಿಸುತ್ತಿರುವ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಘಟಕದಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿ ಐವರು ಮೃತಪಟ್ಟ ಘಟನೆಯ ಬಳಿಕ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದೆ.
ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಗುರುವಾರ ಬೆಂಕಿ ಅವಘಡ ಉಂಟಾಗಿತ್ತು. ಘಟನೆಯಲ್ಲಿ ಐವರು ದಹನವಾಗಿದ್ದರೆ, ಉಳಿದ ಅನೇಕರನ್ನು ರಕ್ಷಿಸಲಾಗಿತ್ತು. ಈ ಘಟನೆಯು ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಗೆ ಯಾವುದೇ ತೊಡಕು ಉಂಟುಮಾಡುವುದಿಲ್ಲ ಎಂದು ಸೆರಮ್ ಸಂಸ್ಥೆ ತಿಳಿಸಿದೆ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು ಮೂರು ಗಂಟೆ ಬೇಕಾಯಿತು. ವಿದ್ಯುತ್ ಸಮಸ್ಯೆಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಎರಡನೆಯ ಬಾರಿ ಮತ್ತೆ ಬೆಂಕಿ ಹೇಗೆ ಕಾಣಿಸಿಕೊಂಡಿತು ಎನ್ನುವುದು ಬಹಿರಂಗವಾಗಿಲ್ಲ.
ಘಟನೆಯಲ್ಲಿ ಮೃತಪಟ್ಟ ಐವರು, ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ ಪರಿಹಾರ ನೀಡುವುದಾಗಿ ಸೆರಮ್ ಸಂಸ್ಥೆ ಘೋಷಿಸಿದೆ.