ಜ. 31ರ ನಂತರ ಸಂಪುಟ ಪುನಾರಚನೆ ಸಾಧ್ಯತೆ; ಬಿಜೆಪಿ ವಿರುದ್ಧ ‘ನರೇಗಾ ಬಚಾವ್’ ಹೋರಾಟಕ್ಕೆ ಸಲೀಂ ಅಹ್ಮದ್ ಕರೆ
ಜ. 31ರ ನಂತರ ಸಂಪುಟ ಪುನಾರಚನೆ ಸಾಧ್ಯತೆ
ಬಿಜೆಪಿ ವಿರುದ್ಧ ನರೇಗಾ ಬಚಾವ್ ಹೋರಾಟ
ಸಲೀಂ ಅಹ್ಮದ್ ನೀಡಿದ ಬಹಿರಂಗ ಸವಾಲು
ಕಾಲೇಜುಗಳಲ್ಲಿ ಶೀಘ್ರವೇ ವಿದ್ಯಾರ್ಥಿ ಸಂಘ ಚುನಾವಣೆ
ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಚರ್ಚೆಗಳು ಬಿರುಸುಗೊಂಡಿರುವ ಬೆನ್ನಲ್ಲೇ, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಜನವರಿ ೩೧ರ ನಂತರ ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂಬ ಮಹತ್ವದ ಸುಳಿವು ನೀಡಿದ್ದಾರೆ. ರಾಹುಲ್ ಗಾಂಧಿಯವರ ಭೇಟಿಯ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯನ್ನು ಒತ್ತಿ ಹೇಳಿದ್ದಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ‘ನರೇಗಾ ಬಚಾವ್’ ಹೋರಾಟ, ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ಪುನರಾರಂಭ ಹಾಗೂ ವಿರೋಧ ಪಕ್ಷದವರ ಗ್ಯಾರೆಂಟಿ ಟೀಕೆಗಳಿಗೆ ತೀಕ್ಷ್ಣವಾಗಿ ಉತ್ತರಿಸುವ ಮೂಲಕ ರಾಜ್ಯ ರಾಜಕೀಯದ ಪ್ರಚಲಿತ ವಿದ್ಯಮಾನಗಳ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವುದು ನಿಜವಾಗಿದ್ದು, ಜನವರಿ ೩೧ರ ನಂತರ ಸಂಪುಟ ಪುನಾರಚನೆಯ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದರು. ತಮಗೆ ಪಕ್ಷದ ಶಿಸ್ತಿನ ಲಕ್ಷ್ಮಣ ರೇಖೆಯ ಅರಿವಿದ್ದು, ಸಂಪುಟದ ಬದಲಾವಣೆಗಳ ಬಗ್ಗೆ ಅಂತಿಮ ತೀರ್ಮಾನವನ್ನು ವರಿಷ್ಠರೇ ತೆಗೆದುಕೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಹಾಗೂ ಸರ್ಕಾರದಲ್ಲಿ ಯಾವುದೇ ರೀತಿಯ ಕ್ರಾಂತಿ ಅಥವಾ ಭ್ರಾಂತಿ ಸೃಷ್ಟಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಲೀಂ ಅಹ್ಮದ್, ಅವರ ಸಾವು ನಾಡಿಗೆ ದೊಡ್ಡ ನಷ್ಟ ಎಂದು ಕಂಬನಿ ಮಿಡಿದರು. ಖಂಡ್ರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ ಅವರು, ಇಂದಿನ ತಮ್ಮ ಕಾರ್ಯಕ್ರಮವನ್ನು ‘ಸಂತಾಪ ಸಭೆ’ ಎಂದು ಘೋಷಿಸಿದರು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರವು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೆಸರನ್ನು ಬದಲಿಸುವ ಮೂಲಕ ಗಾಂಧೀಜಿಯವರ ತತ್ವಗಳನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಇದರ ವಿರುದ್ಧ ರಾಜ್ಯದ ಪ್ರತಿಯೊಂದು ಹಳ್ಳಿ ಮತ್ತು ತಾಲೂಕುಗಳಲ್ಲಿ ‘ನರೇಗಾ ಬಚಾವ್ ಸಂಗ್ರಾಮ’ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಾ, ಬಿಜೆಪಿಯವರಿಗೆ ಬದ್ಧತೆ ಇದ್ದರೆ ಈ ಯೋಜನೆಗಳನ್ನು ನಿಲ್ಲಿಸುವಂತೆ ಬಹಿರಂಗ ಸವಾಲು ಹಾಕಿದರು.
ವಿದ್ಯಾರ್ಥಿ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ಕಾಲೇಜುಗಳಲ್ಲಿ ಮತ್ತೆ ಚುನಾವಣೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. ಹೊಸ ಮುಖಗಳಿಗೆ ಮತ್ತು ಯುವ ಮುಖಂಡರಿಗೆ ರಾಜಕೀಯ ಶಕ್ತಿ ನೀಡಲು ಈ ಕ್ರಮ ಅನಿವಾರ್ಯವಾಗಿದೆ. ಇದಕ್ಕಾಗಿ ಸಮಿತಿಯನ್ನು ರಚಿಸಲಾಗಿದ್ದು, ಮೊದಲ ಹಂತದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಹಾಗೂ ನಂತರ ಎಲ್ಲಾ ಕಾಲೇಜುಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಡಿ.ಕೆ. ಶಿವಕುಮಾರ್ ಪರ ಶಾಸಕರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕರು ನೀಡುವ ಹೇಳಿಕೆಗಳು ಅವರ ವೈಯಕ್ತಿಕ ವಿಚಾರವಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪಕ್ಷದ ಇತಿಮಿತಿಯೊಳಗೆ ಮಾತನಾಡಬೇಕು ಎಂದು ಮಾರ್ಮಿಕವಾಗಿ ಉತ್ತರಿಸಿದರು.
Laxmi News 24×7