ಬೀದರ್: ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ, ಮಾಜಿ ಸಚಿವ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆ ಭಾಲ್ಕಿ ಪಟ್ಟಣದ ಹೊರವಲಯದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನೆರವೇರಿತು.
ವೀರಶೈವ ಲಿಂಗಾಯತ ವಿಧಿ ವಿಧಾನಗಳಂತೆ ಪಟ್ಟಣದ ಹೊರವಲಯದ ಚಿಕಲ್ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಅಪಾರ ಜನಸ್ತೋಮದ ಮಧ್ಯೆ ಅಂತ್ಯಸಂಸ್ಕಾರ ನಡೆಯಿತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಹಾಗೂ ನೆರೆಯ ತೆಲಂಗಾಣ, ಮತ್ತು ಮಹಾರಾಷ್ಟ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಗಲಿದ ಹಿರಿಯ ರಾಜಕಾರಣಿಗೆ ಗೌರವ ನಮನ ಸಲ್ಲಿಸಿದರು.
ಪತ್ನಿ ದಿವಂಗತ ಲಕ್ಷ್ಮೀಬಾಯಿ ಅವರ ಸಮಾಧಿಯ ಪಕ್ಕದಲ್ಲಿಯೇ ಭೀಮಣ್ಣ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ವಿಭೂತಿ, ಪತ್ರೆ, ಹೂ ಹಾಗೂ ರುದ್ರಾಕ್ಷಿಯೊಂದಿಗೆ ವೀರಶೈವ ಲಿಂಗಾಯತ ಧರ್ಮದ ಸಂಪ್ರದಾಯದ ಪ್ರಕಾರ ಸಮಾಧಿ ಮಾಡಲಾಯಿತು. ಇದಕ್ಕೂ ಮುನ್ನ ಮಂತ್ರ ಪಠಣಗಳ ಜೊತೆಗೆ, ಪೊಲೀಸ್ ತಂಡವು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಅಂತಿಮ ಸರ್ಕಾರಿ ಗೌರವ ಸಲ್ಲಿಸಿತು.
Laxmi News 24×7