ಬಳ್ಳಾರಿ: ನಗರದಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಕುಟುಂಬವನ್ನು ಡಿಸಿಎಂ ಡಿಕೆ ಶಿವಕುಮಾರ್ ಇಂದು ಭೇಟಿ ಮಾಡಿ ಸಾಂತ್ವನ ತಿಳಿಸಿದರು. ಬೆಳಗ್ಗೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನದ ವೇಳೆಗೆ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ, ಮೃತ ರಾಜಶೇಖರ್ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.![]()
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಗಲಭೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತನ ಸಾವಾಗಿದೆ. ಮೃತ ರಾಜಶೇಖರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿರುವೆ. ಘಟನೆ ಅಗಬಾರದಾಗಿತ್ತು. ಮೃತ ವ್ಯಕ್ತಿಯ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುವೆ. ಕುಟುಂಬ ಜೊತೆಗೆ ಪಕ್ಷ ಇದೆ ಎಂದು ತಿಳಿಸಲು ಬಂದಿದ್ದೇನೆ. ಉಳಿದ ವಿಚಾರ ಕಾರ್ಯಕರ್ತರ ಚರ್ಚೆ ಮಾಡಿದ ಬಳಿಕ ಹೇಳುವೆ. ಮೃತ ವ್ಯಕ್ತಿಯ ಕುಟುಂಬ ಸರ್ಕಾರಿ ಉದ್ದೋಗಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ವಿಚಾರ ಮಾಡಲಾಗುತ್ತದೆ. ಪ್ರೊಸೀಜರ್ ನೋಡಿಕೊಂಡು ಕಾನೂನು ಚೌಕಟ್ಟಿನ ಅಡಿ ನೌಕರಿ ಕೊಡುವ ಪ್ರಯತ್ನ ಮಾಡುವೆ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಕೂಡ ಈ ವೇಳೆ ಇದ್ದರು.
Laxmi News 24×7