ಬೆಳಗಾವಿ: ಡಿಸಿಸಿ ಬ್ಯಾಂಕ್ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆನ್ನವರ ಮೇಲೆ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಡಿಸಿಸಿ ಬ್ಯಾಂಕ್ ನೌಕರರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು. ಲಕ್ಷ್ಮಣ ಸವದಿ ಅವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಬ್ಯಾಂಕ್ ಕೆಲಸಕ್ಕೆ ತೊಂದರೆಯಾಗದಂತೆ ಅರ್ಧದಷ್ಟು ಸಿಬ್ಬಂದಿ ಕೆಲಸದಿಂದ ದೂರ ಉಳಿದು ಪ್ರತಿಭಟಿಸಿದರು. ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು. ಲಕ್ಷ್ಮಣ ಸವದಿ ಹಾಗೂ ಚಿದಾನಂದ ಸವದಿ ವಿರುದ್ಧ ಘೋಷಣೆ ಮೊಳಗಿಸಿದರು. ಲಕ್ಷ್ಮಣ ಸವದಿ ಹಾಗೂ ಅವರ ಪುತ್ರನನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ನಿರ್ದೇಶಕ ಸ್ಥಾನಕ್ಕೆ ಲಕ್ಷ್ಮಣ ಸವದಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮನವಿ ಸಲ್ಲಿಸಿದರು. ಇದಾದ ಬಳಿಕ ಲಕ್ಷ್ಮಣ ಸವದಿ ಮತ್ತು ಪುತ್ರ ಚಿದಾನಂದ ಸವದಿ ಬಂಧನಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ನೌಕರರ ಒಕ್ಕೂಟದ ಉಪಾಧ್ಯಕ್ಷ ಆನಂದ ಪಾಟೀಲ ಮಾತನಾಡಿ, ಲಕ್ಷ್ಮಣ ಸವದಿ ಅವರು ಅಮಾನುಷವಾಗಿ ವರ್ತಿಸಿದ್ದಾರೆ. ಈ ಘಟನೆಯಿಂದ ನಮ್ಮ ನೌಕರರಿಗೆ ಜೀವ ಬೆದರಿಕೆ ಶುರುವಾಗಿದೆ.
ಹಾಗಾಗಿ, ಸವದಿ ಅವರು ಕ್ಷಮೆ ಕೇಳಲೇಬೇಕು ಮತ್ತು ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಬ್ಯಾಂಕ್ ಗ್ರಾಹಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಅರ್ಧ ನೌಕರರು ಕರ್ತವ್ಯದಲ್ಲಿದ್ದು, ಇನ್ನರ್ಧ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ. ರಾಜಕೀಯ ಒತ್ತಡಕ್ಕೆ ಮಣಿಯದೇ ಪಾರದರ್ಶಕವಾಗಿ ತನಿಖೆ ನಡೆಸಬೇಕು. ಜ.12ರೊಳಗೆ ಸವದಿ ಅವರು ಕ್ಷಮೆ ಕೇಳಿ, ರಾಜೀನಾಮೆ ನೀಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
Laxmi News 24×7