ಬೆಂಗಳೂರು: ಪರಿಶಿಷ್ಟ ವರ್ಗದವರಿಗೆ ಸರ್ಕಾರದಿಂದ ಮಂಜೂರಾದ ಜಮೀನನ್ನು ಮಾರಾಟ ಮಾಡಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿಷೇಧ) ಕಾಯಿದೆ (ಪಿಟಿಸಿಎಲ್)ಯಡಿ ಹಿಂಪಡೆದು, ಅದೇ ಭೂಮಿಯನ್ನು ಮತ್ತೆ ಮಾರಾಟ ಮಾಡಿ ಮರು ಸ್ಥಾಪನೆಗೆ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎನ್ನಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮಂಜೂರಾದ ಭೂಮಿ ಒಮ್ಮೆ ಪುನಃಸ್ಥಾಪನೆಯಾದ ಬಳಿಕ ಕಾನೂನು ಬದ್ಧ ಉತ್ತರಾಧಿಕಾರಿಗಳ ಪರವಾಗಿ ಹಕ್ಕುಗಳನ್ನು ಮರು ಸ್ಥಾಪಿಸುವುದಕ್ಕೆ ಕೋರಿ ಅರ್ಜಿ ಸಲ್ಲಿಸಲು ನಿಷೇಧವಿರುವುದಿಲ್ಲ. ಕಾಯಿದೆಯ ನಿಯಮಗಳ ಪ್ರಕಾರ ಮಂಜೂರಾದ ಭೂಮಿಯನ್ನು ಮಾರಾಟ ಮಾಡಿ ಮೊದಲ ಸುತ್ತಿನಲ್ಲಿ ಹಕ್ಕುಗಳ ಮರು ಸ್ಥಾಪನೆಯಾದ ಬಳಿಕ ಎರಡನೇ ಬಾರಿ ಮಾರಾಟ ಮಾಡಿ ಮರು ಸ್ಥಾಪನೆ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಪಿಟಿಸಿಎಲ್ ಕಾಯಿದೆಯಲ್ಲಿ ಸ್ಪಷ್ಟಪಡಿಸಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಎರಡನೇ ಬಾರಿಗೆ ಪಿಟಿಸಿಎಲ್ ಕಾಯಿದೆಯಡಿ ಜಮೀನನ್ನು ಹಿಂದಿರುಗಿಸುವಂತೆ ಸೂಚಿಸಿದ್ದ ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ದೊಡ್ಡಗಿರಿಯಪ್ಪ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿತು.
ಪಿಟಿಸಿಎಲ್ ಕಾಯಿದೆಯ ಸೆಕ್ಷನ್ 4 ಮತ್ತು 5ರ ಪ್ರಕಾರ ಅನುದಾನಿತರು ಇಲ್ಲವೇ ಅವರ ಉತ್ತರಾಧಿಕಾರಿಗಳು ಕಾಯಿದೆಯ ಸೆಕ್ಷನ್ 4(2) ಹಾಗೂ ಮಂಜೂರಾದ ಸಂದರ್ಭದಲ್ಲಿ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದಾಗ ಎರಡನೇ ಬಾರಿ ಹಕ್ಕು ಮಂಡಿಸಲು ಅವಕಾಶವಿಲ್ಲ ಎಂದು ಕಾಯಿದೆಯಲ್ಲಿ ತಿಳಿಸಿಲ್ಲ. ಹೀಗಾಗಿ ಎರಡನೇ ಸುತ್ತಿನ ಕಾನೂನು ಹೋರಾಟಕ್ಕೆ ಅವಕಾಶವಿರುವುದಿಲ್ಲ ಎಂಬುದಾಗಿ ರುದ್ರಮ್ಮ ಮತ್ತಿತರರ ವಿರುದ್ಧ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಮತ್ತೊಂದು ನ್ಯಾಯಪೀಠದ ನೀಡಿರುವ ಆದೇಶ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪಿಟಿಸಿಎಲ್ ಕಾಯಿದೆ ಜಾರಿಯಾದ ಬಳಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಪರವಾಗಿ ಮಂಜೂರು ಮಾಡಿದ ಭೂಮಿಯನ್ನು ಮಾರಲು ಸರ್ಕಾರದ ಪೂರ್ವಾನುಮತಿ ಕಡ್ಡಾಯ. ಸರ್ಕಾರದ ಪೂರ್ವಾನುಮತಿ ಇಲ್ಲದೆ ಈ ಭೂಮಿಯನ್ನು ವರ್ಗಾಯಿಸಬಾರದು ಎಂದು ಸೆಕ್ಷನ್ 4(2)ರಲ್ಲಿ ಹೇಳಲಾಗಿದೆ. ಈ ಷರತ್ತು ಉಲ್ಲಂಘಿಸಿದ್ದಲ್ಲಿ ಮರು ಸ್ಥಾಪನೆಗೆ ಕೋರಲು ಅವಕಾಶವಿರಲಿದೆ ಎಂದು ಪೀಠ ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರ ದೊಡ್ಡಗಿರಿಯಪ್ಪ ಪರ ವಕೀಲರು, ಜಮೀನು ಮಾರಾಟಕ್ಕೆ ಸರ್ಕಾರ 2005ರ ಡಿಸೆಂಬರ್ 7ರಂದು ಅನುಮತಿ ನೀಡಿದೆ. ಅಲ್ಲದೆ, ಮುನಿನಾರಾಯಣಪ್ಪ ಅವರು ರಮೇಶ್ ಎಂಬವರಿಗೆ ಮಾಡಿಕೊಟ್ಟಿರುವ ಜಿಪಿಎರಲ್ಲಿನ ಷರತ್ತುಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಆದ್ದರಿಂದ ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿ ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಕೆಂಚಮ್ಮ ಮತ್ತವರ ಮಗ ಮುನಿನಾರಾಯಣಪ್ಪ ಎಂಬವರಿಗೆ ಸರ್ಕಾರ ಜಮೀನನ್ನು ಮಂಜೂರು ಮಾಡಿತ್ತು. ಈ ಜಮೀನನ್ನು ಬಸಮ್ಮ ಎಂಬುವರಿಗೆ ಮುನಿನಾರಾಯಣಪ್ಪ ಮಾರಾಟ ಮಾಡಿದ್ದರು. ಬಳಿಕ ಪಿಟಿಸಿಎಲ್ ಕಾಯಿದೆಯಡಿ ಅರ್ಜಿ ಸಲ್ಲಿಸಿ ಆ ಜಮೀನನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಬಳಿಕ ಮುನಿನಾರಾಯಣಪ್ಪ ಅವರು ಅದೇ ಜಮೀನನ್ನು 2005ರಲ್ಲಿ ಮಾರಾಟ ಮಾಡಲು ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದರು. ಆ ನಂತರ ಮುನಿನಾರಾಯಣಪ್ಪ ಇದೇ ಜಮೀನನ್ನು ಬಿ.ಎಂ.ರಮೇಶ್ ಎಂಬವರ ಹೆಸರಿಗೆ ಜಿಪಿಎ ಮಾಡಿಕೊಟ್ಟಿದ್ದರು. ಈ ಸಂದರ್ಭದಲ್ಲಿ, ಜಮೀನಿಗೆ ಮಾರುಕಟ್ಟೆ ಮೌಲ್ಯದ ಮೊತ್ತ ಪಾವತಿಸಬೇಕು. ಮುನಿನಾರಾಯಣಪ್ಪ ಅವರ ಜೀವನೋಪಾಯಕ್ಕಾಗಿ ಪರ್ಯಾಯವಾಗಿ ಕೃಷಿ ಭೂಮಿ ಖರೀದಿಸಿರಬೇಕು ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಈ ಷರತ್ತು ಈಡೇರಿಸದ ರಮೇಶ್, ಜಮೀನನ್ನು ಅರ್ಜಿದಾರ ದೊಡ್ಡಗಿರಿಯಪ್ಪ ಅವರಿಗೆ ಮಾರಾಟ ಮಾಡಿದ್ದರು. ಇದನ್ನು ಪ್ರಶ್ನಿಸಿ ಮುನಿನಾರಾಯಣಪ್ಪ ಅವರ ಮಗ ಎಂ.ಹರೀಶ್ ಪಿಟಿಸಿಎಲ್ ಕಾಯಿದೆಯಡಿ ಉಪ ವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ಉಪ ವಿಭಾಗಾಧಿಕಾರಿಗಳು, ರಮೇಶ್ ಅವರೊಂದಿಗೆ ಮಾಡಿಕೊಂಡ ಜಿಪಿಎ ಪತ್ರ ರದ್ದುಗೊಳಿಸಿ, ಆ ಜಮೀನನ್ನು ಹರೀಶ್ ಎಂಬುವರ ಹೆಸರಿಗೆ ಮಾಡಿಕೊಟ್ಟಿದ್ದರು. ಇದನ್ನು ಜಿಲ್ಲಾಧಿಕಾರಿಗಳು ಎತ್ತಿಹಿಡಿದಿದ್ದರು. ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ದೊಡ್ಡಗಿರಿಯಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.