ಬೆಳಗಾವಿ : ಬೆಳಗಾವಿ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಬೆಳಗಾವಿ – ಬೆಂಗಳೂರು ‘ವಂದೇ ಭಾರತ್’ ರೈಲು ಸಂಚರಿಸುವುದಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಆಗಸ್ಟ್ 10 ರಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಚಾಲನೆ ನೀಡಲಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ್ ಮಾಹಿತಿ ನೀಡಿದ್ದಾರೆ.
ಆಗಸ್ಟ್ 10 ರಂದೇ ಮೋದಿ ಅವರಿಂದ ಗ್ರೀನ್ ಸಿಗ್ನಲ್: ಈ ಕುರಿತು ಜಗದೀಶ ಶೆಟ್ಟರ್ ಅವರನ್ನು
ಪ್ರತಿನಿಧಿ ಸಂಪರ್ಕಿಸಿದಾಗ, ನಿನ್ನೆಯಷ್ಟೇ ದೆಹಲಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಆಗಿ ಮನವಿ ಮಾಡಿಕೊಂಡಿದ್ದೆ. ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಮಂತ್ರಿಗಳು ತ್ವರಿತವಾಗಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಆ ಪ್ರಕಾರ ಆಗಸ್ಟ್ 10ರಂದು ಬೆಂಗಳೂರಿನಲ್ಲಿ ಮೋದಿಯವರು ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಶ್ಬಿನಿ ವೈಷ್ಣವ್, ವಿ ಸೋಮಣ್ಣಗೆ ಧನ್ಯವಾದ ಸಲ್ಲಿಸಿದ ಜಗದೀಶ್ ಶೆಟ್ಟರ್: ನಮ್ಮ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹಾಗೂ ಈ ಕಾರ್ಯಕ್ಕೆ ಸಹಕಾರ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಬೆಳಗಾವಿ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬೆಳಗಾವಿ ಸಂಸದರಾಗಿರುವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ವಾರದಲ್ಲಿ ಆರು ದಿನ ಪಯಣ, ವೇಳಾಪಟ್ಟಿ ಇಂತಿದೆ: ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ವಾರದಲ್ಲಿ ಆರು ದಿನ ಬೆಳಗಾವಿಯಿಂದ ಬೆಳಿಗ್ಗೆ 5.20ಕ್ಕೆ ಹೊರಟು ಅದೇ ದಿನ ಬೆಂಗಳೂರಿಗೆ ಮಧ್ಯಾಹ್ನ 1.50 ಕ್ಕೆ ತಲುಪುತ್ತದೆ. ವಾರದಲ್ಲಿ ಆರು ದಿನ ಬೆಂಗಳೂರಿನಿಂದ ವಾಪಸ್ ಅದೇ ದಿನ ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಳಗಾವಿ ತಲುಪುತ್ತದೆ.
ಈ ಎಲ್ಲ ನಿಲ್ದಾಣಗಳಲ್ಲಿ ಸ್ಟಾಪ್ ನೀಡಲಿರುವ ವಂದೇ ಭಾರತ್ ಎಕ್ಸ್ಪ್ರೆಸ್: ಈ ವಂದೇ ಭಾರತ್ ರೈಲು ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತ ಆದೇಶ ಹೊರಡಿಸಬೇಕಿದೆ. ಆ ಬಳಿಕವೇ ಇದಕ್ಕೆ ಅಧಿಕೃತತೆ ಬರಲಿದೆ.