ರಾಯಚೂರು: ಮೌರ್ಯ ಚಕ್ರವರ್ತಿ ಅಶೋಕನನ್ನು ‘ದೇವನಾಂಪ್ರಿಯ’ ಎಂದು ಉಲ್ಲೇಖಿಸಿರುವ ಏಕೈಕ ಶಿಲಾಶಾಸನ ಪತ್ತೆಯಾಗಿ ಮಸ್ಕಿ ವಿಶ್ವಪ್ರಸಿದ್ಧಿ ಪಡೆದಿದೆ. ಇದೀಗ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಜನವಸತಿ ಇದ್ದ ಬಗ್ಗೆ ಕುರುಹುಗಳು ಸಿಕ್ಕಿವೆ.
ಅಮೆರಿಕ, ಕೆನಡಾ ಹಾಗೂ ಭಾರತದ 20 ಸಂಶೋಧಕರ ತಂಡ ಕೆಲ ತಿಂಗಳ ಹಿಂದೆ ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಯಲು ಆಂಜನೇಯ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಸಿದ ಉತ್ಖನನ ಹಾಗೂ ಸಂಶೋಧನೆಯಿಂದ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಜನವಸತಿ ಇತ್ತು ಎಂಬ ಅಂಶ ಬೆಳಕಿಗೆ ಬಂದಿದೆ.ಕೇಂದ್ರದ ಪುರಾತತ್ವ ಇಲಾಖೆಯ ಪರವಾನಗಿ ಪಡೆಯುವ ಮೂಲಕ ಅಮೆರಿಕದ ಸ್ಕ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ.ಬವೆರ್, ಕೆನಡಾದ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಪೀಟರ್ ಜಿ.ಜೋಹಾನ್ಸನ್ ಹಾಗೂ ದೆಹಲಿಯ ನೊಯಿಡಾ ವಿಶ್ವವಿದ್ಯಾಲಯದ ಹೇಮಂತ್ ಕಡಾಂಬಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಮೂರು ತಿಂಗಳಿನಿಂದ ಈ ಭಾಗದಲ್ಲಿ ಉತ್ಖನನ ಮಾಡಿ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ವಸ್ತುಗಳ ಸಂಗ್ರಹಕ್ಕೆ ಮುಂದಾಗಿತ್ತು.