Breaking News

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
ಕಲಬುರಗಿ ವಿಭಾಗೀಯ ಮಟ್ಟದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
ಬೀದರ್: ಅಂಗನವಾಡಿ ನೇಮಕಾತಿಯಲ್ಲಿ ಇನ್ನಷ್ಟು ಸರಳ, ಹೆಚ್ಚಿನ ಪಾರದರ್ಶಕತೆಗೆ ಕೈಗೊಳ್ಳಬೇಕು. ಗರಿಷ್ಟ ಮೂರು ತಿಂಗಳೊಳಗೆ ಪ್ರಕ್ರಿಯೆ ಪೂರ್ಣ ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲಬುರಗಿ ವಿಭಾಗೀಯ ಮಟ್ಟದ ಮೊದಲ ದಿನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಯಾವುದೇ ಕಾರಣದಿಂದಲೂ ನೇಮಕಾತಿಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದರು.
ನೇಮಕಾತಿ ವೇಳೆ ಸಮಸ್ಯೆಗಳು ಕಂಡು ಬಂದಲ್ಲಿ, ತಕ್ಷಣವೇ ಪರಿಹರಿಸಬೇಕು. ನಮ್ಮ ಇಲಾಖೆ ಜನರಿಗೆ, ಜನರ ಬದುಕಿಗೆ ಹತ್ತಿರವಾದ ಇಲಾಖೆ, ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ಮಾಡದೆ, ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಹಾಗೂ ರಾಜ್ಯದಿಂದ ಕಾಲಕಾಲಕ್ಕೆ ನೀಡಲಾಗುವ ಗುರಿಯನ್ನು ತಲುಪಲೇಬೇಕು. ಅನೇಕ ಕಡೆ ಮಕ್ಕಳಿಗೆ ಸರಿಯಾಗಿ ಮೊಟ್ಟೆ ತಲುಪುತ್ತಿಲ್ಲ. ಹಾಲಿನ ಪೌಡರ್ ಮಾರಿಕೊಳ್ಳುತ್ತಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಅದು ನಿಜವಾಗಿದ್ದಲ್ಲಿ ಅಂಥವುಗಳಲ್ಲಿ ಎಂದಿಗೂ ಸಹಿಸಿಕೊಳ್ಳುವುದಿಲ್ಲ. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಸಿದರು.
ಪ್ರತಿ ಅಧಿಕಾರಿಗಳು, ಸ್ಥಳೀಯ ‌ಸಚಿವರು ಹಾಗೂ ಶಾಸಕರಿಗೆ ಇಲಾಖೆ ಕಾರ್ಯಕ್ರಮ ಮತ್ತು ಪ್ರಗತಿಯ ವಿವರಗಳನ್ನು ಕಾಲಕಾಲಕ್ಕೆ ಕಡ್ಡಾಯವಾಗಿ ನೀಡಬೇಕು ಎಂದು ಸಚಿವರು ಆದೇಶಿಸಿದರು.‌
ಕ್ರಿಯಾಶೀಲ ನಾಯಕಿ: ಖಂಡ್ರೆ ಶ್ಲಾಘನೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳಕರ್ ಅವರು ನಮ್ಮ ಸರ್ಕಾರದ ಬಹಳ ಕ್ರಿಯಾಶೀಲ ಸಚಿವರು, ಮಹಿಳೆಯರು, ‌ಮಕ್ಕಳು, ವಿಕಲಚೇತರು ಹಾಗೂ ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿವಹಿಸಿ ಕೆಲಸ ಮಾಡುತ್ತಿದ್ದಾರೆ. ಸದಾ ಹೆಚ್ಚಿನ ಅನುದಾನಕ್ಕಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಜವಾಬ್ದಾರಿಯುತವಾಗಿ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಜಿಲ್ಲೆಯಲ್ಲಿ ಇಲಾಖೆಯಿಂದ ಆಗಬೇಕಿರುವ ಕೆಲಸ ಕಾರ್ಯಗಳ ಕುರಿತು ಅವರು ಸಭೆಯಲ್ಲಿ ಗಮನಸೆಳೆದರು. ಸಭೆ ಆರಂಭಕ್ಕೂ ಮುನ್ನ ಸಚಿವ ಈಶ್ವರ್ ಖಂಡ್ರೆ ಅವರು ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸನ್ಮಾನಿಸಿದರು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಒಳಗೊಂಡ ಕಲಬುರಗಿ ವಿಭಾಗದ ಮಟ್ಟದಲ್ಲಿ ಐ.ಸಿ.ಡಿ.ಎಸ್ ಶಾಖೆಯಲ್ಲಿ ಕೈಗೊಂಡಿರುವ ಪ್ರಗತಿ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಶನಿವಾರವೂ ಸಭೆ ಮುಂದುವರಿಯಲಿದೆ.
ಸಭೆಯಲ್ಲಿ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್, ಇಲಾಖೆಯ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮ, ಜಿಲ್ಲಾ ಪಂಚಾಯತ್ ಸಿಇಒ ಗಿರೀಶ್ ಬಡೊಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ‌ಪ್ರದೀಪ್ ಗುಂಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ರಾಘವೇಂದ್ರ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ,‌ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್ ಸೇರಿದಂತೆ ಇಲಾಖೆಯ ಜಂಟಿ‌ ನಿರ್ದೇಶಕರು, ಉಪ ನಿರ್ದೇಶಕರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ