ಬೆಂಗಳೂರು: ಅತ್ತಿಗೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಆರೋಪಿಸಿದ್ದ ಪರಿಚಿತ ವ್ಯಕ್ತಿಯನ್ನು ಸ್ನೇಹಿತನ ಮನೆಗೆ ಕರೆಸಿಕೊಂಡು ಹತ್ಯೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ಈ ಸಂಬಂಧ ಕೃತ್ಯದಲ್ಲಿ ಭಾಗಿಯಾಗಿದ್ದ ಶಂಕೆ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ಬಂಡೇಪಾಳ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ಧಾರೆ.
ಉತ್ತರಪ್ರದೇಶದ ಗೋರಕ್ ಪುರ ಜಿಲ್ಲೆಯ ನಿವಾಸಿ ಶೈಲೇಶ್ ಯಾದವ್ನನ್ನು (30) ಹತ್ಯೆ ಮಾಡಿದ ಆರೋಪದಡಿ ಸತೀಶ್ ಹಾಗೂ ಅರುಣ್ ಯಾದವ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಬಿರೇಂದ್ರ ಯಾದವ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.
ಹತ್ಯೆಯಾದ ಶೈಲೇಶ್ ಹಾಗೂ ಆರೋಪಿಗಳೆಲ್ಲರೂ ಉತ್ತರ ಪ್ರದೇಶದ ಮೂಲದವರಾಗಿದ್ದಾರೆ. ಬಂಡೇಪಾಳ್ಯ ಬಳಿಯ ಅಂಬೇಡ್ಕರ್ ನಗರದಲ್ಲಿ ಪ್ರತ್ಯೇಕ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರು. ಜೀವನಕ್ಕಾಗಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ಬಿರೇಂದ್ರ ಯಾದವ್, ತನ್ನ ಅತ್ತಿಗೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಶೈಲೇಶ್ ಎಲ್ಲರ ಬಳಿ ಹೇಳಿದ್ದ. ಇದರಿಂದ ಕುಪಿತಗೊಂಡ ಬಿರೇಂದ್ರ ಆತನಿಗೆ ಬುದ್ಧಿ ಕಲಿಸಲು ಜೂನ್ 18ರಂದು ಸ್ನೇಹಿತನ ಮನೆಗೆ ಶೈಲೇಶ್ನನ್ನು ಕರೆಸಿಕೊಂಡಿದ್ದ. ಈ ವೇಳೆ ಕುಡಿದ ನಶೆಯಲ್ಲಿ ಶೈಲೇಶ್ಗೆ ಹೊಡೆದಿದ್ದಾನೆ. ಈ ವೇಳೆ ಇಬ್ಬರು ಸಹಚರರು ಜೊತೆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ದಿನ ಮನೆಯಲ್ಲಿತ್ತು ಮೃತದೇಹ: ಜೂ.18ರಂದು ಶೈಲೇಶ್ನನ್ನು ಕರೆಸಿ, ಮದ್ಯ ಸೇವಿಸಿದ ಬಳಿಕ ಕೊಲೆಗೈದ ಆರೋಪಿಗಳು ಅದೇ ನಶೆಯಲ್ಲಿ ಮಲಗಿಕೊಂಡಿದ್ದರು. ಬೆಳಗ್ಗೆ ಎದ್ದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಇದನ್ನು ಅರಿತು ಬಿರೇಂದ್ರ ಎಸ್ಕೇಪ್ ಆಗಿದ್ದ. ಹತ್ಯೆಯಾದ ಬಾಡಿಗೆ ಮನೆಯಲ್ಲಿ ವಾಸವಿದ್ದ ಸತೀಶ್ ಕೊಲೆ ಬಗ್ಗೆ ಯಾರಿಗೂ ಹೇಳದೆ ಮನೆಯಲ್ಲಿ ಶವವಿರಿಸಿದ್ದ. ಎರಡು ದಿನಗಳ ಬಳಿಕ ಶವದಿಂದ ಕೊಳೆತ ವಾಸನೆ ಬರಲಾರಂಭಿಸಿತ್ತು. ಇದರಿಂದ ಅನುಮಾನಗೊಂಡ ಮನೆ ಮಾಲೀಕ ಆರೋಪಿ ಸತೀಶ್ನನ್ನು ಪ್ರಶ್ನಿಸಿದ್ದರು.