ಬೆಂಗಳೂರು, ಮೇ 07: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪತ್ನಿ ಪಾರ್ವತಿಯವರು ಕಾನೂನುಬಾಹಿರವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) 14 ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ನಡೆಯಿತು. ಕೋರ್ಟ್ ಸೂಚನೆಯಂತೆ ಬುಧವಾರ (ಮೇ.07) ಅಂತಿಮ ತನಿಖಾ ವರದಿ ಸಲ್ಲಿಸಬೇಕಿದ್ದ ಲೋಕಾಯುಕ್ತ ಪೊಲೀಸರು ಕಾಲಾವಕಾಶ ಕೋರಿ ಮನವಿ ಸಲ್ಲಿಸಿದರು.
ಕೋರ್ಟ್ಗೆ ಹಾಜರಾಗಿದ್ದ ಲೋಕಾಯುಕ್ತ ತನಿಖಾಧಿಕಾರಿ ಕೋರ್ಟ್ಗೆ ಮನವಿ ಸಲ್ಲಿಸಿ ಕೆಲವು ಅಧಿಕಾರಿಗಳ ವಿರುದ್ಧ ತನಿಖೆಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆ.17ಎ ಅಡಿ ಅನುಮತಿ ಕೇಳಿದರು. ಅನುಮತಿ ಬರಬೇಕಾಗಿರುವುದರಿಂದ ತನಿಖೆ ಪೂರ್ಣಗೊಳಿಸಲು ಮತ್ತಷ್ಟು ಕಾಲಾವಕಾಶ ಬೇಕೆಂದು ಕೋರ್ಟ್ಗೆ ಮನವಿ ಮಾಡಿದರು.
ಈ ಬಗ್ಗೆ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಲೋಕಾಯುಕ್ತ ಪರ ಎಸ್‌ಪಿಪಿ ವೆಂಕಟೇಶ್ ಅರಬಟ್ಟಿ ಕೋರ್ಟ್ಗೆ ಸಲ್ಲಿಸಿದರು. ಇದಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಆಕ್ಷೇಪಿಸಿ, ಡಿ.ಬಿ.ನಟೇಶ್ ವಿರುದ್ಧ ಈಗಾಗಲೇ ಅನುಮತಿ ಪಡೆದಿದ್ದಾರೆ. ತನಿಖೆ ವಿಳಂಬಗೊಳಿಸಲು ಅರ್ಜಿ ಸಲ್ಲಿಸುತ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದರು. ಕೋರ್ಟ್ ತಾನೇ ಸ್ವತಃ ಪ್ರಕರಣದ ಕಾಗ್ನಿಜೆನ್ಸ್ ಪಡೆಯಬೇಕೆಂದು ಮನವಿ ಮಾಡಿದರು