ಬೆಳಗಾವಿ: ಇಳುವರಿ ಕುಸಿತದಿಂದಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಸಿಹಿ ಗೆಣಸಿನ ಆವಕ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಧಾರಣೆ ಏರಿಕೆಯಾಗಿದೆ.
ಶನಿವಾರ ಸಿಹಿ ಗೆಣಸು ಕ್ವಿಂಟಲ್‌ಗೆ ₹1,500ರಿಂದ ₹2 ಸಾವಿರಕ್ಕೆ ಮಾರಾಟವಾಗಿದೆ. ಗುಣಮಟ್ಟದ ಗೆಣಸಿಗೆ ಕ್ವಿಂಟಲ್‌ಗೆ ₹2,300 ದರ ಸಿಕ್ಕಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಕ್ವಿಂಟಲ್‌ಗೆ ₹500ರಿಂದ ₹1,200 ದರಕ್ಕೆ ಮಾರಾಟವಾಗಿತ್ತು.
ಬೆಳಗಾವಿ ತಾಲ್ಲೂಕಿನ ಪಶ್ಚಿಮ ಭಾಗ ಮತ್ತು ಮಹಾರಾಷ್ಟ್ರದ ಚಂದಗಢ ತಾಲ್ಲೂಕಿನಲ್ಲಿ ಹೆಚ್ಚು ಗೆಣಸು ಬೆಳೆಯಲಾಗುತ್ತದೆ. ಈ ಗೆಣಸನ್ನು ದೆಹಲಿ, ಗೋವಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರಕ್ಕೆ ಪೂರೈಸಲಾಗುತ್ತದೆ.
2023-24ರಲ್ಲಿ ಬೆಳಗಾವಿ ಎಪಿಎಂಸಿಗೆ 3,68,396 ಕ್ವಿಂಟಲ್ ಗೆಣಸು ಆವಕವಾಗಿತ್ತು. ಕ್ವಿಂಟಲ್‌ಗೆ ₹300ರಿಂದ ₹3,900 ದರದಲ್ಲಿ ಮಾರಾಟವಾಗಿತ್ತು. ಇದೇ ವರ್ಷದ ಏಪ್ರಿಲ್ 1ರಿಂದ ಅಕ್ಟೋಬರ್ 31ರ ವರೆಗೆ 40,064 ಕ್ವಿಂಟಲ್ ಆವಕವಾಗಿದ್ದು, ₹700ರಿಂದ ₹4,200 ದರದಲ್ಲಿ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ದರ ಹೆಚ್ಚಿರುವುದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
‘ಸತತ ಮಳೆಯಿಂದ ಗೆಣಸಿನ ಇಳುವರಿ ಕುಸಿದಿದೆ. ಮತ್ತೊಂದೆಡೆ ಉತ್ತರ ಭಾರತದ ರಾಜ್ಯಗಳಲ್ಲಿ ಗೆಣಸಿಗೆ ಬೇಡಿಕೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಸರಕು ಮಾರುಕಟ್ಟೆಗೆ ಬಾರದ್ದರಿಂದ ದರ ಹೆಚ್ಚಿದೆ’ ಎಂದು ವ್ಯಾಪಾರಿ
ಅಶೋಕ ಗಾವಡಾ ತಿಳಿಸಿದರು.