Breaking News

ಮೂಡಲಗಿ: ರೇಷ್ಮೆ ತಂತ್ರಜ್ಞಾನಿ ಸೋನವಾಲಕರ

Spread the love

ಮೂಡಲಗಿ: ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಅನುಕೂಲವಿಲ್ಲದೆ ಎಮ್ಮೆ ಕಾಯುತ್ತಿದ್ದ ಬಾಲಕ,
ಇಂದು ರೇಷ್ಮೆ ತಂತ್ರಜ್ಞಾನ ರಂಗ ದಲ್ಲಿ ಮಿಂಚಿದ್ದಾರೆ. ರೇಷ್ಮೆ ತಂತ್ರಜ್ಞಾನ ಮತ್ತು ಉದ್ದಿಮೆ ಬೆಳವಣಿಗೆಗೆ ಅವರು ಕೈಗೊಂಡ ವಿವಿಧ ಸಂಶೋಧನೆಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿವೆ.

 

ಇದು ಇಲ್ಲಿನ ತಮ್ಮಣ್ಣ ಸೋನವಾಲಕರ (ಟಿ.ಎನ್‌.ಸೋನವಾಲಕರ) ಅವರ ಯಶೋಗಾಥೆ. ವಯಸ್ಸು 91. ಆದರೆ, ರೇಷ್ಮೆ ತಂತ್ರಜ್ಞಾನ ರಂಗದ ಬೆಳವಣಿಗೆಗೆ ಅವರ ಮನಸ್ಸು ಇಂದಿಗೂ ತುಡಿಯುತ್ತದೆ.

ಭಾರತದಲ್ಲಿ ಗುಣಮಟ್ಟದ ರೇಷ್ಮೆ ಸಿಗದೆ, ವಿದೇಶದಿಂದ ಆಮದು ಮಾಡಿಕೊಳ್ಳುವ ಕಾಲವೊಂದಿತ್ತು. ರೈತರು ಬೆಳೆದ ರೇಷ್ಮೆ ಗೂಡಿನಿಂದ ನೂಲು ಬಿಡಿಸುವುದು ಸರಳವಾಗಿರಲಿಲ್ಲ. ಇದನ್ನು ಮನಗಂಡ ಸೋನವಾಲಕರ, ರೇಷ್ಮೆ ಗೂಡಿನಿಂದ ಸರಾಗವಾಗಿ ನೂಲು ಬಿಡಿಸುವ ಸುಧಾರಿತ ಯಂತ್ರ, ಪೆಡಲ್‌ ಸ್ಪಿನ್ನಿಂಗ್‌ ಯಂತ್ರಗಳನ್ನು ಆವಿಷ್ಕರಿಸಿದರು.

ಕೃಷಿ ಕುಟುಂಬದಲ್ಲಿ ಜನಿಸಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್‌ ವ್ಯಾಸಂಗ ಮಾಡಿದ ಅವರು, ಮೈಸೂರಿನ ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ ಕಿರಿಯ ಸಂಶೋಧಕರಾಗಿದ್ದರು. 1982ರಲ್ಲಿ ಬೆಂಗಳೂರಿನಲ್ಲಿ ಕೇಂದ್ರೀಯ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆ ಸ್ಥಾಪಿಸಿದರು.

ಹಲವು ಆವಿಷ್ಕಾರ: ಟಿ.ಎನ್‌.ಸೋನವಾಲಕರ ಅವರು, ಸುಧಾರಿತ ಟಸರ ನೂಲು ಬಿಚ್ಚುವಿಕೆ ಯಂತ್ರ, ಹಿಪ್ಪುನೆರಳೆ, ರೇಷ್ಮೆ ನೂಲು ಬಿಚ್ಚುವಿಕೆಗಾಗಿ ಸುಧಾರಿತ ಚರಕ, ಸುಧಾರಿತ ಪೆಡಲ್‌ ಸ್ಪಿನ್ನಿಂಗ್ ಯಂತ್ರ, ಚರಕ ಮತ್ತು ಕಾಟೇಜ್‌ ಬೆಸಿನ್‌ಗಳಿಗಾಗಿ ಸುಧಾರಿತ ಒಲೆಗಳು, ಹಿಪ್ಪುನೆರಳು ರೇಷ್ಮೆ ನೂಲು ಬಿಚ್ಚುವಿಕೆಗಾಗಿ ಕಾಟೇಜ್‌ ಬೆಸಿನ್ ಹೀಗೆ… ಹಲವು ಆವಿಷ್ಕಾರಗಳನ್ನು ಮಾಡಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ 105ಕ್ಕೂ ಅಧಿಕ ಪ್ರಬಂಧ ಮಂಡಿಸಿದ್ದಾರೆ. ಇಂಗ್ಲೆಂಡ್‌, ಜಪಾನ್, ಚೀನಾ, ಹಾಂಕಾಂಗ್, ಅಮೆರಿಕ, ಸಿಂಗಾಪುರ, ಫ್ರಾನ್ಸ್, ಇಟಲಿ, ನೇಪಾಳ, ಫಿಲಿಫೈನ್ಸ್, ಬಾಂಗ್ಲಾದೇಶ, ಶ್ರೀಲಂಕಾಕ್ಕೆ ಭೇಟಿ ನೀಡಿ, ತಮ್ಮ ಜ್ಞಾನ ಪ್ರಚುರಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಕೇಂದ್ರ ಸರ್ಕಾರದ ಕೇಂದ್ರೀಯ ರೇಷ್ಮೆ ಮಂಡಳಿ ಸ್ಥಾಪನೆ ಅಮೃತ ಮಹೋತ್ಸವದ ಸಮಾರಂಭದಲ್ಲಿ ಅವರಿಗೆ ‘ಜೀವಮಾನ ಸಾಧನೆ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 1996ರಲ್ಲಿ ಫ್ರಾನ್ಸ್‌ನ ‘ಲೂಯಿ ಪಾಶ್ಚರ್ಯ’ ಅಂತರರಾಷ್ಟ್ರೀಯ ಪ್ರಶಸ್ತಿ, ಶೇಷ್ಠ ವಿಜ್ಞಾನಿ ಪ್ರಶಸ್ತಿ, ಎಮಿನೆಂಟ್‌ ಟೆಕ್ಸ್‌ಟೈಲ್‌ ಎಂಜಿನಿಯರ್‌ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.

ಪಿ. ಶಿವಕುಮಾರ, ಸದಸ್ಯ ಕಾರ್ಯದರ್ಶಿ, ಕೇಂದ್ರೀಯ ರೇಷ್ಮೆ ಮಂಡಳಿ, ಬೆಂಗಳೂರುಭಾರತವು ರೇಷ್ಮೆ ತಂತ್ರಜ್ಞಾನದಲ್ಲಿ ವಿಶ್ವಮಾನ್ಯವಾಗಿ ಗುರುತಿಸಿಕೊಳ್ಳುವಲ್ಲಿ ಟಿ.ಎನ್‌.ಸೋನವಾಲಕರ ಕೊಡುಗೆ ದೊಡ್ಡದು


Spread the love

About Laxminews 24x7

Check Also

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Spread the love ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್‌ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ