ಬೆಂಗಳೂರು: ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ, ಶೇ.40ರಷ್ಟು ಅನ್ಯ ಭಾಷೆ ಬಳಕೆಗೆ ಅವಕಾಶ ಕಲ್ಪಿಸಲು ನಿಯಮಕ್ಕೆ ತಿದ್ದುಪಡಿ ತಂದು ಹೊರಡಿಸಲಾಗಿದ್ದ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಬಜೆಟ್ ಅಧಿವೇಶನ ಹತ್ತಿರದಲ್ಲಿರುವಾಗ ವಿಧಾನಮಂಡಲದಲ್ಲೇ ವಿಧೇಯಕದ ಮೂಲಕ ಜಾರಿಗೆ ತರುವ ಬದಲು ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಔಚಿತ್ಯವೇನಿತ್ತು ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.
ಜ. 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ತರಲು ಅನುಮೋದನೆ ನೀಡಲಾಗಿತ್ತು. ನಾಮಫಲಕದಲ್ಲಿ ಕನ್ನಡ ಕಡೆಗಣನೆ ವಿರೋಧಿಸಿ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸರ್ಕಾರ ಈ ನಿಲುವು ಪ್ರಕಟಿಸಿತ್ತು. ಫೆ.28ರೊಳಗೆ ಹೊಸ ನೀತಿ ಅನುಷ್ಠಾನ ಮಾಡಲಾಗುತ್ತದೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ವಿಷಯ ಪ್ರಕಟಿಸಿದ್ದರು. ಅದಾದ ಒಂದು ವಾರದಲ್ಲಿ ನಡೆದ ಸಂಪುಟ ಸಭೆಯಲ್ಲಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024ಕ್ಕೆ ಅನುಮೋದನೆ ನೀಡಲಾಗಿತ್ತು.
ಕನ್ನಡ ಪರ ಹೋರಾಟಗಾರರನ್ನು ಸಂತೈಸಲು, ನಾಡು-ನುಡಿಗೆ ಕಟಿಬದ್ಧವೆಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ಸಾರಿತ್ತು. ಸರ್ಕಾರ ತನ್ನ ನಿರ್ಣಯವನ್ನು ರಾಜಭವನಕ್ಕೆ ಕಳಿಸಿತ್ತು. ಅಧಿವೇಶನ ನಡೆಯದ ಸಂದರ್ಭದಲ್ಲಿ ತುರ್ತಾಗಿ ಇದನ್ನು ಜಾರಿ ಮಾಡುವ ಅಗತ್ಯವಿದೆ ಈ ಕಾರಣಕ್ಕೆ ಸುಗ್ರೀವಾಜ್ಞೆ ತರಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿತ್ತು. ಆದರೆ ರಾಜಭವನ ಸರ್ಕಾರದ ವಾದವನ್ನು ಒಪ್ಪಿಲ್ಲ. ಫೆಬ್ರವರಿಯಲ್ಲಿ ಜಂಟಿ ಅಧಿವೇಶನ, ಬಜೆಟ್ ಅಧಿವೇಶನ ಇರುವಾಗ ಸುಗ್ರೀವಾಜ್ಞೆ ತರುವಷ್ಟು ತುರ್ತು ಏನಿದೆ ಎಂಬರ್ಥದಲ್ಲಿ ಪ್ರಸ್ತಾವನೆ ವಾಪಸ್ ಕಳಿಸಿದೆ ಎಂದು ಮೂಲಗಳು ತಿಳಿಸಿವೆ.