ಧಾರವಾಡ: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಪಕ್ಷ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಿದೆ ಎಂಬ ವಿಚಾರಕ್ಕೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯೆಸಿ, ನಾನು ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳಿಲ್ಲ.
ಕೊಟ್ಟರೆ ನೋಡೋಣ ಏನಾಗುತ್ತದೆ ಎಂದು ಹೇಳಿದರು.
ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರು ಕೆಲ ಶಾಸಕರ ಜೊತೆ ದುಬೈಗೆ ಹೊರಟಿರುವ ವಿಚಾರ ನನಗೆ ಗೊತ್ತಿಲ್ಲ, ನನಗಂತೂ ದೇಶ ಬಿಟ್ಟು ಹೋಗಲು ಬರುವುದಿಲ್ಲ. ನನಗೆ ಹೊರದೇಶಕ್ಕೆ ಹೋಗಲು ಅವಕಾಶವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಶಾಸಕ ರವಿ ಗಣಿಗ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಖರೀದಿ ಮಾಡುತ್ತಿರಬಹುದು? ಹಿಂದಿನಿಂದ ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಅದನ್ನೇ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ಜನರಿಂದ ಗೆದ್ದು ಬಿಜೆಪಿಯವರು ರಾಜ್ಯದಲ್ಲಿ ಎಂದಿಗೂ ಆಡಳಿತಕ್ಕೆ ಬಂದಿಲ್ಲ. ಆದರೆ ಈ ಸಲ ನಮ್ಮ ರಾಜ್ಯದಲ್ಲಿ ಅದು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.